News Karnataka Kannada
Thursday, April 25 2024
ಬೆಂಗಳೂರು

ರೊಬಸ್ಟಾ ಬೆಳೆಗಾರರರಿಗೆ ಶುಕ್ರ ದೆಸೆ : ಕಾಫಿ ಇತಿಹಾಸದಲ್ಲೇ ಮೊದಲ ಬಾರಿಗೆ

; ಜಾಗತಿಕ ಕೊರತೆಯ ಕಾರಣದಿಂದಾಗಿ ರೊಬಸ್ಟಾ ಕಾಫಿ ದರವು ಇದೇ ಮೊದಲ ಬಾರಿಗೆ ಅರೇಬಿಕಾ ಕಾಫೀ ದರವನ್ನೂ ಹಿಂದಿಕ್ಕಿ ಸರ್ವಕಾಲಿಕ ಗರಿಷ್ಟ ದರ ದಾಖಲಿಸಿದೆ.
Photo Credit : NewsKarnataka

ಬೆಂಗಳೂರು :  ಜಾಗತಿಕ ಕೊರತೆಯ ಕಾರಣದಿಂದಾಗಿ ರೊಬಸ್ಟಾ ಕಾಫಿ ದರವು ಇದೇ ಮೊದಲ ಬಾರಿಗೆ ಅರೇಬಿಕಾ ಕಾಫೀ ದರವನ್ನೂ ಹಿಂದಿಕ್ಕಿ ಸರ್ವಕಾಲಿಕ ಗರಿಷ್ಟ ದರ ದಾಖಲಿಸಿದೆ. ಸೋಮವಾರ ವಯನಾಡ್‌ ಮಾರುಕಟ್ಟೆಯಲ್ಲಿ ರೋಬಸ್ಟಾ ಹಸಿ ಕಾಫಿ ಹಣ್ಣುಗಳ ಫಾರ್ಮ್‌ಗೇಟ್ ಬೆಲೆ ಪ್ರತಿ ಕಿಲೋಗ್ರಾಂಗೆ ದಾಖಲೆಯ ₹172 ಅನ್ನು ಮುಟ್ಟಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ ₹115 ಇತ್ತು. ಇದೇ ಸಮಯದಲ್ಲಿ ರೋಬಸ್ಟಾ ಪಾರ್ಚ್‌ಮೆಂಟ್‌ ಕಾಫಿ ಬೀಜಗಳ ಸ್ಪಾಟ್ ಬೆಲೆಯು ಕೆಜಿಗೆ ₹ 315 ಕ್ಕೆ ಸರ್ವಕಾಲಿಕ ಏರಿಕೆ ದಾಖಲಿಸಿದೆ.

2023 ರ ಇದೇ ಅವಧಿಯಲ್ಲಿ ದರ ಕಿಲೋಗೆ 220 ರೂಪಾಯಿಗಳಷ್ಟಿತ್ತು. ಮಾರ್ಚ್ 2022 ರಲ್ಲಿ ಕಚ್ಚಾ ಹಣ್ಣುಗಳು ಮತ್ತು ಪಾರ್ಚ್‌ ಮೆಂಟ್‌ ಗೆ ದರ ಕ್ರಮವಾಗಿ ₹ 80 ಮತ್ತು ₹ 145 ರಷ್ಟಿತ್ತು. ಕೊಡಗಿನ ಮಾರುಕಟ್ಟೆಯಲ್ಲಿ ಬುಧವಾರ ರೊಬಸ್ಟಾ ಪಾರ್ಚ್‌ಮೆಂಟ್‌ ದರ 50 ಕೆಜಿ ಚೀಲಕ್ಕೆ 14,400 ರಿಂದ 14,700 ರೂಪಾಯಿಗಳಿಗೆ ಏರಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ. ರೊಬಸ್ಟಾ ದರ ಯಾವತ್ತೂ ಅರೇಬಿಕಾ ಪಾರ್ಚ್‌ ಮೆಂಟ್‌ ದರಕ್ಕಿಂತ ಜಾಸ್ತಿ ಆಗಿದ್ದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಚೆರ್ರಿ ಹಾಗೂ ಪಾರ್ಚ್‌ ಮೆಂಟ್‌ ಕಾಫಿ ದರದಲ್ಲಿ ಅರೇಬಿಕಾ ದರವನ್ನೂ ಹಿಂದಿಕ್ಕಿದೆ. ಅರೇಬಿಕಾ ಚೆರಿ ಕಾಫಿ ದರ 50 ಕೆಜಿ ಚೀಲಕ್ಕೆ 8000-8200 ಇದ್ದರೆ ( ಔಟರ್ನ್‌ ಆಧರಿಸಿ )ರೊಬಸ್ಟಾ ದರ 8600 ರೂಪಾಯಿಗೂ ಹೆಚ್ಚಾಗಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಫ್ತುದಾರ ಬ್ರೆಜಿಲ್‌ , ಇಂಡೋನೇಷ್ಯಾ ಮತ್ತು ವಿಯಟ್ನಾಂ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಾಶವಾಗಿರುವುದೇ ದರ ಏರಿಕೆಗೆ ಕಾರಣವಾಗಿದೆ. ಈ ಸಾಲಿನಲ್ಲಿ ಕಳಪೆ ಇಳುವರಿ ಹೊರತಾಗಿಯೂ, ದೇಶದ ಕಾಫಿ ಉತ್ಪಾದನೆಯು 3.54 ಲಕ್ಷ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ, ಇದು ಕಳೆದ ವರ್ಷದ ಉತ್ಪಾದನೆ 3.52 ಲಕ್ಷ ಟನ್‌ಗಳಿಗಿಂತ ಸ್ವಲ್ಪ ಹೆಚ್ಚಳವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದರು.

ಕಾಫಿ ದರದ ಸರ್ವಕಾಲಿಕ ದಾಖಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ರೊಬಸ್ಟಾ ಕಾಫಿ ದರವು ಮತ್ತಷ್ಟು ಏರಿಕೆ ದಾಖಲಿಸಲಿದೆ ಎಂದರು. ವಿಯಟ್ನಾಂ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಕಾಫಿ ಬೆಳೆ ನಾಶ ಆಗಿರುವುದರಿಂದ ಅಲ್ಲದೆ ಗುಣಮಟ್ಟದಲ್ಲಿ ಭಾರತೀಯ ಕಾಫಿ ಇತರ ದೇಶಗಳಿಗಿಂತ ಮೇಲ್ಮಟ್ಟದಾಗಿರುವುದರಿಂದ ಪ್ರೀಮಿಯಂ ಬೆಲೆಗೆ ಮಾರಾಟವಾಗುತ್ತಿದೆ , ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗೇ ದರ ಹೆಚ್ಚಳವಾಗಿದೆ ಎಂದರು.

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವು 71% ನಷ್ಟು ಭಾಗವನ್ನು ಹೊಂದಿದೆ, ನಂತರ ಕೇರಳ (21%), ಮತ್ತು ತಮಿಳುನಾಡು (5%) ಇವೆ. ಆಂಧ್ರ ಪ್ರದೇಶ , ಅಸ್ಸಾಂ ನಲ್ಲಿ ಕಾಫಿ ಬೆಳೆಯಲಾಗುತ್ತದಾದರೂ ಉತ್ಪಾದನೆ ತೀರಾ ಕಡಿಮೆ ಇದೆ. ಭಾರತದಿಂದ ರಫ್ತಾಗುವ ಶೇಕಡಾ 70 ರಷ್ಟು ಕಾಫಿ ಮುಖ್ಯವಾಗಿ ಇಟಲಿ, ಬೆಲ್ಜಿಯಂ, ಜರ್ಮನಿ ಮತ್ತು ರಷ್ಯಾ ಗೆ ಹೋಗುತ್ತಿದೆ. ಸಾಮಾನ್ಯವಾಗಿ ಕಾಫಿ ಬೆಳೆಯುವ ದೇಶಗಳು ತಮ್ಮ ಎಲ್ಲಾ ಕಾಫಿಯನ್ನು ಮಾರಾಟ ಮಾಡುವುದಿಲ್ಲ. ಮಾರುಕಟ್ಟೆ ಬೆಲೆ ಸ್ಥಿರತೆಗಾಗಿ ಬಫರ್‌ ಸ್ಟಾಕ್‌ (Buffer stock) ಇಟ್ಟುಕೊಂಡಿರುತ್ತವೆ. ಆದರೆ ಈ ಬಾರಿ ಎಲ್ಲಾ ಬಫರ್‌ ಸ್ಟಾಕ್‌ ನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಬಫರ್‌ ಸ್ಟಾಕ್‌ ಕೂಡ ಇಲ್ಲದಾಗಿದ್ದು ಇದೂ ಕೂಡ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳಕ್ಕೆ ಕಾರಣ ಆಗಲಿದೆ.

ಕಾಫಿ ದರ ಏರಿಕೆಯಿಂದಾಗಿ ಮುಂದಿನ ತಿಂಗಳುಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಾಫಿ ಶಾಪ್‌ಗಳಲ್ಲಿ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಬಳಕೆದಾರರಿಗೂ ಹೊರೆ ಆಗಬಹುದು ಇದರಿಂದ ಅನಿವಾರ್ಯವಾಗಿ ಬಳಕೆದಾರರು ಟೀ ಸೇವನೆಗೆ ಒಲವು ತೋರಬಹುದು. ಅಲ್ಲದೆ ಇದೇ ರೀತಿ ಮುಂದಿನ 2-3 ವರ್ಷ ರೊಬಸ್ಟಾ ದರ ಏರುಮುಖ ಆಗಿದ್ದರೆ ಅರೇಬಿಕಾ ಬೆಳೆಗಾರರು ಸಹಜವಾಗಿಯೇ ರೊಬಸ್ಟಾ ಬೆಳೆ ಬೆಳೆಯಲು ಮುಂದಾಗಬಹುದು. ಏಕೆಂದರೆ ಅರೇಬಿಕಾ ತೋಟದ ನಿರ್ವಹಣೆಯ ಶೇಕಡಾ 50 ರಷ್ಟು ವೆಚ್ಚದಲ್ಲಿ ರೊಬಸ್ಟಾ ಕಾಫಿ ಬೆಳೆಯಬಹುದಲ್ಲದೆ ಇದಕ್ಕೆ ಬೋರರ್‌ ಕಾಟ ವಿರಳ. ಮುಂದಿನ ದಿನಗಳಲ್ಲಿ ಈ ದರವು ಮತ್ತಷ್ಟು ಏರಿಕೆ ದಾಖಲಿಸಲಿದ್ದು ಅಲ್ಪ ಕುಸಿತ ದಾಖಲಿಸಿದರೂ ದರ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು