ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಧರ್ಮ ಹಾಗು ದೇವರ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ ಹೊರತು ಅಭಿವೃದ್ದಿ ಮಾಡುತ್ತಿಲ್ಲ. ಕೇವಲ ರಾಜ್ಯಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರ ಬೆಂಬಲಿಗನೇ ಮುಂಡ್ಲಿ ಅಣೆಕಟ್ಟಿನ ಗೇಟ್ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮುಂಡ್ಲಿ ಅಣೆಕಟ್ಟಿನ ಗೇಟ್ ಹಾಗೂ ಉಪಕರಣ ಕಳ್ಳತನವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಕರಾವಳಿಗೆ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಕಾರ್ಕಳದ ಶಾಸಕರಾದ ಸುನಿಲ್‌ ಕುಮಾರ್. ಶಾಸಕರ ಹಾಗೂ ಅವರ ಪಟಾಲಂನ ಕಮಿಷನ್ ಉಪಟಳದಿಂದ ಜವುಳಿ ಪಾರ್ಕ್ ಕ್ಷೇತ್ರದಲ್ಲಿ ಇನ್ನೂ ತಲೆ ಎತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಮುಂಡ್ಕೂರಿನ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಹಲ್ಲೆ ಹಾಗೂ ಕಾರ್ಕಳಕ್ಕೆ ನೀರುಣಿಸುವ ಮುಂಡ್ಲಿ ಅಣೆಕಟ್ಟಿ ಮೂರು ಗೇಟ್‌ಗಳ ಕಳವು ಪ್ರಕರಣ ಇವರ ಪಟಾಲಂನ ದುಷ್ಕೃತ್ಯಗಳಿಗೆ ಸಾಕ್ಷಿಯಾಗಿವೆ ಎಂದವರು ದೂರಿದರು. ಮುಂಡ್ಕೂರು ಧಾರ್ಮಿಕ ಕ್ಷೇತ್ರದ ದುರ್ಘಟನೆ ಶಾಸಕನ ಬೆಂಬಲಿಗರಿಂದ ನಡೆದರೆ, ಮುಂಡ್ಲಿ ಅಣೆಕಟ್ಟಿನ ಮೂರು ಗೇಟ್‌ಗಳನ್ನು ಅವರ ಬೆಂಬಲಿಗ ಕೆಲಸಗಾರರೇ ಕದ್ದಿದ್ದಾರೆ. ಅಜೆಕಾರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾ ದರೂ ಎಲ್ಲೂ ಬಹಿರಂಗಗೊಳ್ಳದಂತೆ ಅವರು ನೋಡಿಕೊಂಡಿದ್ದಾರೆ ಎಂದು ಮುನಿಯಾಲು ಆರೋಪಿಸಿದರು. ಈ ಬಗ್ಗೆ ಕೂಡಲೇ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಜಿಪಂ, ತಾಪಂ ಸೇರಿದಂತೆ ವಿವಿಧ ಚುನಾವಣೆಗಳು ಶೀಘ್ರವೇ ನಡೆಯಲಿರುವುದರಿಂದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸುವ ಕೆಲಸವನ್ನು ಶಾಸಕರ ಬೆಂಬಲಿಗರು ನಡೆಸುತಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಅಪಪ್ರಚಾರ ಕಾರ್ಕಳ ಕ್ಷೇತ್ರದಲ್ಲಿ ಶಾಸಕರಿಂದ ನಡೆಯುತ್ತಿದೆ ಎಂದರು.

ಐದು ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು 425 ಕೋಟಿ ರೂ. ತಾಲೂಕಿನ ಮನೆಮಗಳಿಗೆ ತಲುಪಿವೆ ಎಂದು ಹೇಳಿದ ಉದಯ ಶೆಟ್ಟಿ, ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ 60 ಕೋಟಿ ರೂ.ಸೇರಿದಂತೆ ಒಟ್ಟು 110 ಕೋಟಿ ರೂ.ಗಳ ಅನುದಾನ ಬಂದಿವೆ. ಆದರೆ ಶಾಸಕರು ಮಾತ್ರ ಯಾವುದೇ ಅನುದಾನ ಬಂದಿಲ್ಲ ಎಂದು ಹೇಳಿ ಅಪಪ್ರಚಾರ ಮಾಡುತಿದ್ದಾರೆ ಎಂದು ಹೇಳಿದರು.

ಕುಕ್ಕಂದೂರು ಗ್ರಾಮದ ಪರಪು ಸೇತುವೆ, ರೆಂಜಾಳ ಗ್ರಾಪಂನ ಬಳಿಯ ಸೇತುವೆ, ಬೋಳಗ್ರಾಮದ ರುದ್ರ ಸೋಮನಾಥೇಶ್ವರ ದೇವಸ್ಥಾನ ಬಳಿಯ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ತಲಾ 1.5 ಕೋಟಿ ರೂ. ಬಿಡುಗಡೆ ಯಾಗಿದೆ. ಅಲ್ಲದೇ ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಹಲವು ಗ್ರಾಮಗಳ ಒಟ್ಟು 29 ಕಾಮಗಾರಿಗಳಿಗೆ ರಾಜ್ಯ ಸರಕಾರ ಮುಖ್ಯಮಂತ್ರಿಗಳ ಮೂಲಕ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಮುನಿಯಾಲು ತಿಳಿಸಿದರು.

View this post on Instagram

A post shared by News Karnataka (@newskarnataka)