News Karnataka Kannada
Wednesday, April 24 2024
Cricket
ರಾಮನಗರ

ಎಕ್ಸ್‌ಪ್ರೆಸ್ ವೇ ನಲ್ಲಿ ಸುಧಾರಣಾ ಕ್ರಮಗಳ ಪರಿಶೀಲನೆ

Review of reform measures on the expressway
Photo Credit : By Author

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಸುರಕ್ಷ ಕ್ರಮಗಳ ಸುಧಾರಣೆ ಕುರಿತು ಪರಿಶೀಲನೆಗಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನೇಮಿಸಿರುವ ಮೂವರು ತಜ್ಞರನ್ನು ಒಳಗೊಂಡ ಅಧಿಕಾರಿಗಳ ತಂಡ ಆಗಮಿಸಿ ಎಕ್ಸ್‌ಪ್ರೆಸ್ ಹೆದ್ದಾರಿ, ಸರ್ವಿಸ್ ರಸ್ತೆಗಳು, ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ಪರಿಶೀಲನೆ ನಡೆಸಿದೆ.

ರಸ್ತೆ ಸುರಕ್ಷತೆ ಸಲಹೆಗಾರ ಸುದರ್ಶನ್ ಕೆ. ಪೊಪ್ಲಿ, ಪ್ರಾಧಿಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್ (ಆರ್‌ಎಸ್‌ಒ) ಹಾಗೂ ಸೊಹ್ನಾ-ದೌಸಾ ಎಕ್ಸ್‌ಪ್ರೆಸ್ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್ ಸಿಂಗ್ ಅವರನ್ನು ಒಳಗೊಂಡ ಅಧಿಕಾರಿಗಳು ಹೆದ್ದಾರಿಯುದ್ದಕ್ಕೂ ಸಂಚರಿಸಿ ಕೆಲವು ಪ್ರಮುಖ ಸ್ಥಳಗಳನ್ನು ವೀಕ್ಷಣೆ ಮಾಡಿದರು.

ಎಕ್ಸ್‌ಪ್ರೆಸ್ ವೇ ನಲ್ಲಿ ಕಂಡುಬರುವ ಲೋಪಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಿ, ಹತ್ತು ದಿನದೊಳಗೆ ವರದಿ ನೀಡಬೇಕೆಂದು ಪ್ರಾಧಿಕಾರದ ರಸ್ತೆ ಸುರಕ್ಷತೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಸುನೀಲ್ ಜಿಂದಾಲ್ ಅವರು ನೀಡಿರುವ ಸೂಚನೆ ಮೇರೆಗೆ ಕೆಂಗೇರಿ ಬಳಿಯಿಂದ ತಜ್ಞರ ತಂಡ ಫ್ಲೇಓವರ್ ಮೂಲಕ ಪ್ರಯಾಣಿಸಿ ಕಾರ್ಯಾಚರಣೆ ಆರಂಭಿಸಿದರು.

ಕಣಿಮಿಣಿಕೆ, ಹೆಜ್ಜಾಲ, ವಂಡರ್‌ಲಾ ಗೇಟ್, ಹನುಮಂತನಗರ, ಲಕ್ಷ್ಮೀಸಾಗರ ಗೇಟ್, ಕೇತುಗಾನಹಳ್ಳಿ ಮೇಲ್ಸೇತುವೆ, ದಾಸಪ್ಪನದೊಡ್ಡಿ ಅಂಡರ್‌ಪಾಸ್, ಕೆಂಪನಹಳ್ಳಿ ಗೇಡ್, ಮಾಯಗಾನಹಳ್ಳಿ ಮೂಲಕ ಸಾಗಿ ಸಂಗನಬಸವನದೊಡ್ಡಿ ಬಳಿಯ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳು, ಅಂಡರ್‌ಪಾಸ್ ಬಳಿ ಮಳೆ ನೀರಿನಿಂದ ಸಮಸ್ಯೆ ಉಂಟಾಗುತ್ತಿದ್ದ ಸ್ಥಳವೂ ಸೇರಿದಂತೆ ಕೆಲವು ಪ್ರಮುಖ ಸ್ಥಳಗಳ ವೀಕ್ಷಣೆ ಮಾಡುತ್ತಾ ಮೈಸೂರು ಕಡೆಗೆ ಪ್ರಯಾಣ ಮುಂದುವರೆಸಿದರು.

ಎಕ್ಸ್‌ಪ್ರೆಸ್ ವೇ ನಲ್ಲಿ ವಾಹನಗಳ ಸಂಚಾರ ಆರಂಭಗೊಂಡ ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಸಂಭವಿಸಿದ ೫೫೦ಕ್ಕೂ ಹೆಚ್ಚು ಅಪಘಾತಗಳಲ್ಲಿ 158ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ, ರಸ್ತೆಯ ಅಸುರಕ್ಷತೆ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದೇ ಇದಕ್ಕೆ ಕಾರಣ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ದಶಪಥ ಹೆದ್ದಾರಿ ಪರಿಶೀಲನೆ ನಡೆಸಿದ್ದ ಜಿಲ್ಲಾ ಪೊಲೀಸರು, ಅಪಘಾತ ಸ್ಥಳಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು. ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರೂ ಕೂಡ ರಾಮನಗರ ಮತ್ತು ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್ ವೇ ನಲ್ಲಿ ಸಂಚರಿಸಿ ಪರಿಶೀಲಿಸಿದ್ದರು. ನಂತರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಕ್ಸ್‌ಪ್ರೆಸ್ ಹೈವೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಅಪಘಾತಗಳ ತಡೆಗೆ ಕೆಲವು ಸಂಚಾರ ನಿಮಯಗಳ ಪಾಲನೆ, ವೇಗಮಿತಿ, ಸಿಸಿಟಿವಿ ಕಣ್ಗಾವಲು ಸೇರಿದಂತೆ ಕೆಲವು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಡಿಜಿಪಿ ಅಲೋಕ್‌ಕುಮಾರ್ ಅವರು ಸೂಚನೆ ನೀಡಿದ್ದರು. ಅಲ್ಲದೇ ತೀರಾ ಇತ್ತೀಚೆಗೆ ಸಂಸದ ಡಿ.ಕೆ.ಸುರೇಶ್ ಅವರು ರಾಮನಗರದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನು ನಡೆಸಿ ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುತಿಸಿರುವ ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೋಡ್ ಶೈನ್, ಸ್ಪೀಡ್ ಐಡೆಂಟಿಟಿ ಕ್ಯಾಮೆರಾಗಳನ್ನು ಅಳವಡಿಸಿ ಅತೀ ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸುವಂತೆ ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್ ವೇ ನಲ್ಲಿ 100 ಕಿ.ಮೀ ಮೀರಿ ವೇಗವಾಗಿ ಚಲಿಸುವ ವಾಹನಗಳ ಚಾಲಕರಿಗೆ ದಂಡ ಪ್ರಯೋಗ ಮಾಡುವ ಪ್ರಕ್ರಿಯೆಯೂ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು