News Karnataka Kannada
Monday, April 29 2024
ರಾಮನಗರ

ರಾಮನಗರ: ಕೋಡಿಬಿದ್ದ ನಲ್ಲಿ ಗುಡ್ಡೆ ಕೆರೆ, ರೈತರಿಗೆ ಸಂತಸ

Kodibida nilgudde lake, farmers are happy
Photo Credit : By Author

ರಾಮನಗರ: ತಾಲ್ಲೂಕಿನ ಬಿಡದಿ ಪಟ್ಟಣದ ಹೊರವಲಯದಲ್ಲಿರುವ ನಲ್ಲಿಗುಡ್ಡೆ ಕೆರೆ ಭರ್ತಿಯಾಗಿದ್ದು ಕೆರೆ ಕೋಡಿ ಬಿದ್ದಿದೆ. ಕೆರೆ ಮೈದುಂಬಿ ಕೋಡಿ ಹಳ್ಳದಲ್ಲಿ ನೀರು ಹರಿಯುವುದನ್ನು ಪಟ್ಟಣದ ಜನರು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಡದಿ ಪಟ್ಟಣ ಹಾಗೂ ಈ ಭಾಗದ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ನಲ್ಲಿಗುಡ್ಡೆಕೆರೆ, ಕೃಷಿ ಚಟುವಟಿಕೆಗಳಿಗೆ ಮತ್ತು ಕೊಳವೆ ಬಾವಿಗಳಿಗೆ ಜಲ  ಮೂಲವೂ ಆಗಿದೆ. ಅಲ್ಲದೆ ಬಿಡದಿ ಭಾಗದಲ್ಲಿ ತ್ಯಾಜ್ಯ ಮುಕ್ತವಾಗಿ ಉಳಿದುಕೊಂಡಿರುವ ಏಕೈಕ ಕೆರೆಯೂ ಆಗಿದೆ.

ಇತ್ತೀಚಿನ ದಿನಗಳಲ್ಲಿ ಸುರಿದ ಭಾರಿ ಮಳೆಗೆ ಸಂಪೂರ್ಣ ಭರ್ತಿಯಾಗಿತ್ತು. ಕಳೆದ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಲ್ಲಿಗುಡ್ಡೆ ಕೆರೆ ತುಂಬಿ ಹರಿದಿದ್ದು ಕೋಡಿ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಮಿನಿ ಜಲಪಾತದಂತೆ ಕಾಣುವ ಕೋಡಿ ಹಳ್ಳವನ್ನು ಜನರು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.

ಮೊದಲ ಬಾರಿಗೆ ನಲ್ಲಿಗುಡ್ಡೆ ಕೆರೆ 2004ರಲ್ಲಿ ತುಂಬಿ ಕೋಡಿ ಹರಿದಿದ್ದು ಹೊರತುಪಡಿಸಿ, ಮಳೆ ಅಭಾವ ಹಾಗೂ ಸತತ ಬರಗಾಲದಿಂದ ಸುಮಾರು ಒಂದೂವರೆ ದಶಕದಿಂದಲೂ ಖಾಲಿಯಾಗಿತ್ತು. ೨೦೧೭ರಲ್ಲಿ ಸುರಿದ ಮಳೆಗೆ ಎರಡನೇ ಬಾರಿಗೆ ತುಂಬಿ ಕೋಡಿ ಹರಿದಿತ್ತು. 2021ರ ಅಕ್ಟೋಬರ್ 21 ರಂದು ಮೂರನೇ ಬಾರಿಗೆ ಸಂಪೂರ್ಣ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿದಿತ್ತು. ಈಗ ತನ್ನ ಹಿಂದಿನ ವೈಭವವನ್ನು ಮತ್ತೆ ಮೈದುಂಬಿಕೊಂಡಿದೆ.

ನಲ್ಲಿಗುಡ್ಡೆ ಕೆರೆ ಈಗ ಮಳೆಯಿಂದ ಭರ್ತಿಯಾಗಿ ಸುಮಾರು 380 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದು ಸುಮಾರು 216.45 ದಶಲಕ್ಷ ಘನ ಅಡಿಗಳಷ್ಟು (ಎಂಸಿಎಫ್‌ಸಿ) ಪ್ರಮಾಣದ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸುತ್ತಲಿನ 67 ಕಿ.ಮೀ ವ್ಯಾಪ್ತಿಯಲ್ಲಿನ ಮಳೆ ನೀರು ಹಳ್ಳ ಕೊಳ್ಳಗಳ ಮೂಲಕ ನಲ್ಲಿಗುಡ್ಡ ಕೆರೆಗೆ ಹರಿದು ಬರಲಿದೆ. ಈ ಕೆರೆಗೆ 25 ಅಡಿ ಎತ್ತರದ ಏರಿಯನ್ನು ನಿರ್ಮಿಸಲಾಗಿದೆ.

ಕೆರೆಯಲ್ಲಿ ಶೇಖರಣೆಯಾದ ನೀರಿನಿಂದ ಅಂರ್ತಜಲ ವೃದ್ಧಿಯಾಗಿ ಬಿಡದಿ, ಕೆಂಚನಕುಪ್ಪೆ, ದಾಸಪ್ಪನದೊಡ್ಡಿ, ತಮ್ಮಣ್ಣನದೊಡ್ಡಿ, ಶೆಟ್ಟಿಗೌಡನದೊಡ್ಡಿ, ಗಾಣಕಲ್, ಅವರಗೆರೆ, ಕಾಕರಾಮನಹಳ್ಳಿ, ವಾಜರಹಳ್ಳಿ, ಬನ್ನಿಕುಪ್ಪೆ ಸೇರಿದಂತೆ ಮುಂತಾದ ಹಳ್ಳಿಗಳ ಕೊಳವೆ ಬಾವಿಗಳು ಪ್ರಯೋಜನ ಪಡೆಯಲಿವೆ. ಇದೀಗ ಸಂಪೂರ್ಣ ನೀರು ಸಂಗ್ರಹವಾಗಿದ್ದು, ಒಳಹರಿವಿನಷ್ಟೇ ನೀರು ಕೋಡಿಯ ಮೂಲಕ ಹೊರ ಹೋಗುತ್ತಿದೆ.

ಬಿಡದಿ ಸುತ್ತಮುತ್ತ ಹಾಗೂ ತಾವರೆಕೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತೊರೆ ಹಳ್ಳಗಳ ಮೂಲಕ ನಲ್ಲಿಗುಡ್ಡೆಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಹೆಚ್ಚುವರಿ ನೀರು ಕೋಡಿಯ ಮೂಲಕ ಕಾಲುವೆಯಲ್ಲಿ ಹರಿಯುತ್ತಿದೆ. ಸಣ್ಣ ನದಿಯಂತೆ ಹರಿದು ಹೋಗುತ್ತಿರುವ ನೈಸರ್ಗಿಕ ನೀರು ಬಾನಂದೂರು, ಇಟ್ಟಮಡು ಗ್ರಾಮಗಳ ಮೂಲಕ ಸಾಗಿ ವೃಷಭಾವತಿ ನದಿಯನ್ನು ಸೇರಲಿದೆ. ನಂತರ ಕನಕಪುರದ ಸಮೀಪ ಅರ್ಕಾವತಿ ನದಿಯಲ್ಲಿ ವಿಲೀನವಾಗಿ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಸಂಗಮವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು