ರಾಮನಗರ : ಒಬ್ಬರ ಜೀವ ಉಳಿಸಲು ಇನ್ನೊಬ್ಬರು ಧಾವಿಸಿ, ಕೊನೆಗೆ ಪತಿ-ಪತ್ನಿ ಇಬ್ಬರೂ ಪ್ರಾಣ ಕಳೆದುಕೊಂಡ ದುರಂತವೊಂದು ಸಂಭವಿಸಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಕೂಡ್ಲೂರು ಗ್ರಾಮದ ವೆಂಕಟೇಶ್ (48) ಮತ್ತು ಪಾರ್ವತಮ್ಮ (42) ಸಾವಿಗೀಡಾದ ದಂಪತಿ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಇವರಿಬ್ಬರೂ ಮುಳುಗಿ ನೀರುಪಾಲಾಗಿ ಮೃತಪಟ್ಟಿದ್ದಾರೆ.
ಈ ದಂಪತಿ ಕುರಿಗಳ ಮೈ ತೊಳೆಯಲು ಕೆರೆ ಬಳಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಪತ್ನಿ ಜಾರಿ ನೀರಲ್ಲಿ ಮುಳುಗಲಾರಂಭಿಸಿದ್ದರು. ಆಕೆಯನ್ನು ರಕ್ಷಿಸಲೆಂದು ಪತಿಯೂ ನೀರಿಗೆ ಧುಮುಕಿದ್ದು, ಬಳಿಕ ಇಬ್ಬರೂ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶವಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.