ಬೆಂಗಳೂರು: ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ.
ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಜುಲೈ 2ನೇ ವಾರದಿಂದ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ₹ 50 ರಿಂದ ₹ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ.
ಕಳೆದ ವರ್ಷ ಭಾರಿ ಮಳೆಯಿಂದಾಗಿ ಕಡಿಮೆ ಉತ್ಪಾದನೆ, ಈ ವರ್ಷ ಮುಂಗಾರು ವಿಳಂಬದಿಂದಾಗಿ ಕಡಿಮೆ ಉತ್ಪಾದನೆಯ ಭಯ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆ ಸೇರಿದಂತೆ ಹಲವಾರು ಕಾರಣಗಳು ಅಕ್ಕಿಯ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ.
ಖಾರಿಫ್ ಋತುವಿನ ಕೊಯ್ಲು ಪೂರ್ಣಗೊಂಡ ನವೆಂಬರ್ ವೇಳೆಗೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಅಕ್ಕಿ ಪೂರೈಕೆ ಬಿಗಿಯಾಗಿದ್ದರೆ, ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ದರದಲ್ಲಿ ಅಕ್ಕಿ ಕರ್ನಾಟಕಕ್ಕೆ ಬರುತ್ತಿದೆ ಎಂದು ಅಕ್ಕಿ ವ್ಯಾಪಾರಿಗಳು ತಿಳಿಸಿದ್ದಾರೆ. ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲೆ ಕೇಂದ್ರವು ನಿಷೇಧ ಹೇರಿದ ನಂತರ ಬೆಲೆ ಈಗ ಸ್ವಲ್ಪಮಟ್ಟಿಗೆ ಸ್ಥಿರವಾಗಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ.