ಬೆಂಗಳೂರು: ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗೆ ಸದ್ಯ 1200 ರು. ಮಾಸಾಶನ ನೀಡಲಾಗುತ್ತಿದೆ. ಇದನ್ನು 2000 ರು.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಳ ಮಾಡುವ ಕೆಲಸ ಮಾಡುತ್ತೇನೆ. ಆದರೆ ಎಷ್ಟು ಹೆಚ್ಚಳ ಮಾಡುತ್ತೇನೆ ಎಂದು ಈಗಲೇ ಹೇಳುವುದಿಲ್ಲ. ಪರಿಶೀಲನೆ ಮಾಡಿ ಮುಂದಿನ ಬಜೆಟ್ನಲ್ಲಿ ಮಾಸಾಶನ ಹೆಚ್ಚಳದ ಘೋಷಣೆ ಮಾಡುತ್ತೇನೆ ಎಂದು ಹೇಳಿದರು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ ಎಂದರು.