ಬೆಂಗಳೂರು: ಕರ್ನಾಟಕದ ಹಲವೆಡೆ ಇಂದು(ಸೋಮವಾರ) ಬೆಳ್ಳಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ. ರಾಜ್ಯದ 17 ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದುರ್ಗ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಇಂದು(ಅ.30) ಬೆಳ್ಳಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ. ಇಬ್ಬರು ಅಧಿಕಾರಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಚಿತ್ರದುರ್ಗದ ಹಿರಿಯೂರಿನಲ್ಲಿ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ದಾಳಿಯಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ H.E.ನಾರಾಯಣ ಎನ್ನುವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿಯ ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿಯಾಗಿದೆ. ಹಾವೇರಿ RFO ಪರಮೇಶಪ್ಪ ಪೇರಲನವರ್ ಹಾಗೂ ನ್ಯಾಮತಿ RFO ಮಾಲತೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮತ್ತು ದೇವದುರ್ಗದ KBJNL ಇಇ ತಿಪ್ಪಣ್ಣ ಅನ್ನದಾನಿ ಮನೆಗಳ ಮೇಲೆ ದಾಳಿಯಾಗಿದೆ.