ಬೆಂಗಳೂರು: ನಗರದ ಕೃಷಿ ಜಿಕೆವಿಕೆ ಆವರಣದಲ್ಲಿ ನ. 17ರಿಂದ 20ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳಾದ ಸಾಮೆ– ಜಿಪಿಯುಎಲ್ 11, ಬರಗು–ಜಿಪಿಯುಪಿ 32, ರಾಗಿ– ಎಂ.ಎಲ್ 22, ಸೂರ್ಯಕಾಂತಿ ಕೆಬಿಎಸ್ಎಚ್–85 ಮತ್ತು ಕೆಂಪು ಹಲಸು ತಳಿಗಳು ಬಿಡುಗಡೆಯಾಗಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮೇಳದಲ್ಲಿ ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ-ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ತಾಕುಗಳಲ್ಲಿ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಗಳ ಎಲ್ಲ ವಿಭಾಗಗಳಲ್ಲಿ ನಡೆದಿರುವ ಸಂಶೋಧನೆ, ಆವಿಷ್ಕಾರದ ಮಾಹಿತಿಯನ್ನು ವಸ್ತುಪ್ರದರ್ಶನದಲ್ಲಿ ತಿಳಿಸಲು ವ್ಯವಸ್ಥೆ ಮಾಡಲಾಗಿದೆ. ಬರಗಾಲದಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನದ ಮೂಲಕ ಸಿರಿಧಾನ್ಯಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗುವುದು