ಬೆಂಗಳೂರು: ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಯಮಿತ ಸಂಸ್ಥೆಯು ಸಿಂಗಾಪುರದ ಸಂಸ್ಥೆಯಿಂದ ಕೊಡಲಾಗುವ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ 2023ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಿಂಗಾಪುರದಲ್ಲಿ ಗುರುವಾರ ನಡೆದ ಸುಸ್ಥಿರ ಜಾಗತಿಕ ಸಮಾವೇಶದಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಂಗಾಪುರ ವಿಶ್ವ ಸುಸ್ಥಿರತೆ ಕಾಂಗ್ರೆಸ್ನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆಯ್ಕೆಯಾಗಿತ್ತು. ಕೆಎಸ್ಆರ್ಟಿಸಿ ಸಂಸ್ಥೆಯು ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಕೆಎಸ್ಆರ್ಟಿಸಿ ಸಂಸ್ಥೆಗೆ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯನ್ನು ವಿಲ್ಬರ್ ಎನ್.ಜಿ., ಕಂಟ್ರಿ ಮ್ಯಾನೇಜರ್, ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಸರ್ಟಿಪೈಡ್ ಪ್ರೋಫೆಶನಲ್ ಅಕೌಂಟೆಂಟ್ಸ್ ಹಾಗೂ ಅಟಾರ್ನಿ, ಕರೀನ ಲೆನೋರ್ ಎಸ್. ಬಯೋನ್, ಚೀಫ್ ಎನ್ವೈರ್ಮೆಂಟ್, ಸೋಷಿಯಲ್ ಮತ್ತು ಗೌರ್ನನ್ಸ್ ಅಫೀಸರ್, ಕಂಪ್ಲಯನ್ಸ್ ಮತ್ತು ಡಾಟಾ ಪ್ರೈವೆಸಿ ಅಧಿಕಾರಿಹಗಳು ಪ್ರಶಸ್ತಿ ಪ್ರದಾನ ಮಾಡಿದರು.
ಇನ್ನು ಕೆಎಸ್ಆರ್ಟಿಸಿ ನಿಗಮದ ಪರವಾಗಿ ಶ್ರೀಮತಿ ಮಂಜುಳ ನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ಹಾಗೂ ಡಾ. ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು.