ಬೆಂಗಳೂರು : 2014ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿದ್ದು, ಈ ಮೈತ್ರಿ ಹೊಸದೇನಲ್ಲ. ಎರಡೂ ಪಕ್ಷದ ಕಾರ್ಯಕರ್ತರು ಮೊದಲಿನಿಂದಲೂ ಬಹಳ ಸಮನ್ವತೆಯಿಂದ ಇದ್ದಾರೆ ಈಗಲೂ ಇರುತ್ತಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಯಾವ ಗೊಂದಲಗಳಿಲ್ಲ. ಚುನಾವಣೆಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ನಮ್ಮ ಗುರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಶ್ ನಮಗೆ ಶಾಶ್ವತ ಶತ್ರು ಅಲ್ಲ. ಅಗತ್ಯವಿದ್ದರೆ ಅವರನ್ನು ಭೇಟಿ ಮಾಡುತ್ತೇನೆ. ಈ ಮಣ್ಣಿನಲ್ಲಿ ರಾಮಾಂಜನೇಯ ಯುದ್ಧವೇ ನಡೆದು ಹೋಗಿದೆ. ನಾವೆಲ್ಲ ಹುಲು ಮಾನವರು. ದೇವರ ಮುಂದೆ ಯಾವ ಲೆಕ್ಕ ಹೇಳಿ. ರಾಜಕೀಯದಲ್ಲಿ ಹೋರಾಟ, ಜಗಳ ಇದ್ದೇ ಇರುತ್ತದೆ. ನಮಗೇನು ಸುಮಲತಾ ದೂರ ಅಲ್ಲ. ಅಂಬರೀಶ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಗಿದ್ದವು ಎಂದರು.
ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಹೇಳಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ನೀರಾವರಿಗೆ ಎಚ್.ಡಿ.ದೇವೇಗೌಡ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಕಿಡಿಕಾರಿದರು.
ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ನೀವು ಯಾರು? ಕಾಂಗ್ರೆಸ್ಗೆ ನೀವು ವಲಸಿಗರಲ್ಲವಾ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗರನ್ನು ಕಸದಬುಟ್ಟಿಗೆ ಹಾಕಿ ಅಧಿಕಾರ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಎಚ್ಡಿಕೆ ಮಂಡ್ಯದಲ್ಲಿ ಸೋಲುತ್ತಾರೆ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಅಧಿಕಾರ ಮಾಡುವುದು ಬಿಟ್ಟು ನನ್ನ ಗೆಲುವು-ಸೋಲಿನ ಬಗ್ಗೆ ಹೇಳುತ್ತಿರುವ ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರು ಎಂದು ಟೀಕಿಸಿದ ಅವರು, ನಿಖಿಲ್ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನರು ಉತ್ತರ ಕೊಡುತ್ತಾರೆ ಎಂದರು.
ನಾನು ಕನ್ನಡಿಗ. ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಈ ಬಾರಿ ಮಂಡ್ಯದಲ್ಲಿ ಹಳೆಯ ಸ್ನೇಹಿತರ ಜೊತೆ ಸ್ಪರ್ಧೆ ಎದುರಿಸಬೇಕು. ಸ್ನೇಹಿತರ ಎದುರು ಸ್ಪರ್ಧೆಗಿಳಿಯುತ್ತಿರುವುದು ನನ್ನ ಹಣೆಬರಹ ಎಂದರು.