ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಹತ್ವದ ಪಂದ್ಯದಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಪಿಚ್‌ ಕೈಕೊಟ್ಟಿದ್ದರಿಂದ ಆರ್‌ಸಿಬಿ ಬ್ಯಾಟಿಂಗ್ ಪಡೆ ಪರದಾಡಿತ್ತು. ಆರಂಭಿಕ ಫಿಲ್ ಸಾಲ್ಟ್ (63) ಹೋರಾಟದ ಹೊರತಾಗಿಯೂ ರಜತ್ ಪಾಟಿದಾರ್, ಟಿಮ್ ಡೇವಿಡ್ ಅವರಂತಹ ಸ್ಫೋಟಕ ಬ್ಯಾಟರ್‌ಗಳು ರನ್ ಗಳಿಸಲು ತಿಣುಕಾಡಿದ್ದರು.

ಆರ್‌ಸಿಬಿ, ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ (8 ಅಂಕ), ಡೆಲ್ಲಿ ಹಾಗೂ ಗುಜರಾತ್ (ತಲಾ 6 ಅಂಕ) ತಂಡಗಳು ತೀವ್ರ ಪೈಪೋಟಿ ನೀಡುತ್ತಿವೆ. ಮುಂದಿನ ಬಹುತೇಕ ಪಂದ್ಯಗಳನ್ನು ತವರಿನಿಂದ ಹೊರಗೆ ಆಡಬೇಕಿರುವ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದ ಅಭಿಮಾನಿಗಳಿಗೆ ಗೆಲುವಿನ ವಿದಾಯ ಹೇಳಲು ಆರ್‌ಸಿಬಿ ಯೋಜನೆ ರೂಪಿಸಿದೆ.

ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕಥೆಯೂ ಭಿನ್ನವಾಗಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೇವಲ 100 ರನ್‌ಗಳಿಗೆ ಆಲೌಟ್ ಆಗಿ 99 ರನ್‌ಗಳ ಹೀನಾಯ ಸೋಲು ಅನುಭವಿಸಿದ್ದು, ರನ್ ರೇಟ್ ಪಾತಾಳಕ್ಕೆ ಕುಸಿದಿದೆ.

ನಾಯಕ ಶುಭ್ ಮನ್ ಗಿಲ್ ಮತ್ತು ಜಾಸ್ ಬಟ್ಲರ್ ಉತ್ತಮ ಫಾರ್ಮ್‌ನಲ್ಲಿದ್ದರೂ ಬಿ. ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್ ಹಾಗೂ ರಾಹುಲ್ ತೆವಾಟಿಯಾ ಅವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಪ್ರಸಿದ್ಧ್ ಕೃಷ್ಣ, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ರಶೀದ್ ಖಾನ್ ಅವರಂತಹ ಘಟಾನುಘಟಿ ಬೌಲರ್‌ಗಳನ್ನು ಹೊಂದಿದ್ದರೂ, ಬ್ಯಾಟರ್‌ಗಳ ವೈಫಲ್ಯ ತಂಡಕ್ಕೆ ಮುಳುವಾಗಿದೆ.