ಬೆಂಗಳೂರು: ಗಂಡ ವಿದೇಶದಲ್ಲಿರುವ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿದ್ದಕ್ಕೆ ಜೈಲುಪಾಲಾಗಿರುವ ಘಟನೆ ನಡೆದಿದೆ. ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದನು. ಈ ವ್ಯಕ್ತಿಯನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಆರೋಪಿ ಎಂದು ಗುರುತಿಸಲಾಗಿದೆ.
ರಾಘವನ್ ಸಂಪತ್ (30) ಅಶ್ಲೀಲ ವಿಡಿಯೋ ಕಳುಹಿಸಿ ಶಿಕ್ಷೆಗೆ ಒಳಪಟ್ಟ ವ್ಯಕ್ತಿ. ರಾಘವನ್ ಸಂಪತ್ ಮತ್ತು ಯುವತಿ ನಡುವೆ 2016ರಲ್ಲಿ ಮದುವೆಯಾಗಿತ್ತು. ಮುಂದೆ ಒಂದೇ ವರ್ಷದಲ್ಲಿ ಅವರಿಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟು, ಇಬ್ಬರೂ ಸೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಅರ್ಜಿಯ ವಿಚಾರಣೆ ನಿಧಾನಕ್ಕೆ ನಡೆಯುತ್ತಿದೆ. ಈ ನಡುವೆ ಯುವತಿ ಕೆಲಸದ ಸಲುವಾಗಿ ವಿದೇಶಕ್ಕೆ ಹೋಗಿದ್ದಳು. ಈ ವೇಳೆ ಸಂಪತ್ ರಾಜ್ ಒಂದು ಅಶ್ಲೀಲ ವಿಡಿಯೊವನ್ನು ಹೆಂಡತಿಗೆ ಈ ಮೇಲ್ ಮೂಲಕ ಕಳುಹಿಸಿದ್ದಾನೆ.
ವಿಡಿಯೋವನ್ನು ನೋಡಿದ ಯುವತಿ ತನ್ನ ಸೋದರನಿಗೆ ವಿಷಯ ತಿಳಿಸಿದ್ದಳು. ಆತ ಕೂಡಲೇ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಅದರ ಬೆನ್ನಿಗೆ ಯುವತಿ ಕೂಡಾ ವಿದೇಶದಿಂದ ಬಂದು ಸ್ವತಃ ದೂರು ದಾಖಲಿಸಿದ್ದಾಳೆ. ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿ ಅದನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ತನಿಖಾಧಿಕಾರಿಗಳು ರಾಘವನ್ ವಿರುದ್ಧ ಐಟಿ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಗೆ ಒಂದು ತಿಂಗಳ ಜೈಲು ಮತ್ತು 45 ಸಾವಿರ ರೂ. ದಂಡ ವಿಧಿಸಲಾಗಿದೆ.