ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಅವರಿಗೆ ಕೇವಲ ಪ್ರಚಾರ, ಚುನಾವಣೆ ವಿಷಯವನ್ನಾಗಿಸಿ ಗೆಲುವು ಸಾಧಿಸುವುದು ಅಷ್ಟೇ ಬೇಕಿರುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ಐಟಿ ಎಂಬುದು ಈಗ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಆಗಿದೆ. ನಿಜವಾಗಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಅವರದ್ದಾಗಿದ್ದರೆ ವಿಡಿಯೋ ಹರಿಯಬಿಟ್ಟವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ಆ ವಿಚಾರವಾಗಿ ದೂರು ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಪ್ರಜ್ವಲ್ ಪ್ರಕರಣದಲ್ಲಿ 16 ವರ್ಷ ವಯಸ್ಸಿನ ಬಾಲಕಿಯೂ ಸಂತ್ರಸ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಆ ಹೇಳಿಕೆ ನೀಡಿದರು? ಆ ಬಗ್ಗೆ ಎಸ್ಐಟಿ ಯಾಕೆ ಇನ್ನೂ ತನಿಖೆ ಮಾಡಿಲ್ಲ? 400 ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ರಾಹುಲ್ ಗಾಂಧಿಯವರನ್ನು ಇನ್ನು ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಾನು ಪ್ರಜ್ವಲ್ ರೇವಣ್ಣರನ್ನ ವಹಿಸಿಕೊಂಡು ಮಾತನಾಡುತ್ತಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ, ಸಂತ್ರಸ್ತೆಯರಿಗೆ ರಕ್ಷಣೆ ಕೊಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ. ಪ್ರಜ್ವಲ್ ಪ್ರಕರಣದ ಪಾರದರ್ಶಕ ತನಿಖೆಯಾಗಬೇಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪದಲ್ಲಿ ನಡೆಯುವ ತನಿಖೆಯಿಂದ ವಾಸ್ತವ ಹೊರಬರುವುದಿಲ್ಲ. ಎಸ್ಐಟಿಯಿಂದ ನ್ಯಾಯಯುತವಾದ ತನಿಖೆ ಸಾಗದು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದೂ ಕುಮಾರಸ್ವಾಮಿ ಆಗ್ರಹಿಸಿದರು.