ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ವಿದ್ಯಾರ್ಥಿಗಳ ಬಸ್‌ ಪಾಸ್‌ಗಳ ಮಾನ್ಯತೆ ಅವಧಿಯನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೆಚ್ಚು ಮಾಡಿದೆ.

1 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿ ಬಸ್ ಪಾಸ್‌ಗಳ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಲು ಬಿಎಂಟಿಸಿ ನಿರ್ಧಾರ ಮಾಡಿದ್ದು, ಇದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಸಾಮಾನ್ಯವಾಗಿ ಪ್ರತಿ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ಗಳ ಅವಧಿಯು ಮಾರ್ಚ್ 31ಕ್ಕೆ ಮುಗಿಯುತ್ತದೆ.

ಈ ಬಾರಿ ಸಹ ಮಾರ್ಚ್‌ 31ಕ್ಕೆ ಕೊನೆಯಾಗಿತ್ತು. ಆದರೆ ಈ ವರ್ಷ ಏಪ್ರಿಲ್‌ 10ರ ವರೆಗೆ ತರಗತಿಗಳನ್ನ ಮಾಡಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣದಿಂದ ಪಾಸ್‌ ಮಾನ್ಯತೆಯನ್ನ ವಿಸ್ತರಣೆ ಮಾಡಲಾಗುತ್ತಿದೆ.

ಬಿಎಂಟಿಸಿ ನೀಡಿರುವ ಮಾಹಿತಿಗಳ ಪ್ರಕಾರ, ಈ ಪಾಸ್‌ ಮಾನ್ಯತೆ ವಿಸ್ತರಣೆ ಕೇವಲ 1 ರಿಂದ 9ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ವಿದ್ಯಾರ್ಥಿಗಳು ಹಳೆಯ ಬಸ್‌ ತೋರಿಸಿ ಏಪ್ರಿಲ್‌ 10ರ ವರೆಗೆ ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಪ್ರಯಾಣ ಮಾಡಬಹುದಾಗಿದೆ.