ಬೆಂಗಳೂರು: ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಲಕ್ಷಾಂತರ ಪಿಂಚಣಿದಾರರು ತಮ್ಮ ಹಣ ಪಡೆಯಲು ಅಂಚೆ ಕಚೇರಿಗೆ ಹೋಗಿ ಬರಬೇಕೆಂದಿಲ್ಲ. ಮನೆಯಲ್ಲೇ ಕುಳಿತು ತಮ್ಮ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ.
ಭಾರತೀಯ ಅಂಚೆ ಇಲಾಖೆ ಇಂಥದೊಂದು ವಿಧಾನ ಅನುಷ್ಠಾನಕ್ಕೆ ತಂದಿದೆ. ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲ ಚೇತನರ ಮಾಸಾಶನ, ಎಂಡೋಸಲ್ಫಾನ್ ಸಂತ್ರಸ್ತರ ಮಾಸಾಶನ ಸೇರಿದಂತೆ ಅನೇಕ ಬಗೆಯ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿದಾರರು ಬಹುಪಾಲು ಅಂಚೆ ಇಲಾಖೆ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಇವರೆಲ್ಲರೂ ಮನೆಯಲ್ಲೇ ಹಣ ಡ್ರಾ ಮಾಡುವ ಡಿಕ್ಯೂಬ್ ಸಾಫ್ಟ್ವೇರ್ ಅಂಚೆ ಇಲಾಖೆಯಲ್ಲಿ ಅಭಿವೃದ್ಧಿಗೊಂಡು ಚಾಲ್ತಿಗೆ ಬರುತ್ತಿದೆ.
ಡಿಕ್ಯೂಬ್ ಸಾಫ್ಟ್ವೇರ್ ಮೂಲಕ ಅಭಿವೃದ್ಧಿಪಡಿಸಿದ ಆ್ಯಪ್ನ್ನು ಪೊಸ್ಟ್ಮೆನ್ಗಳ ಮೊಬೈಲ್ಗೆ ನೀಡಲಾಗಿದ್ದು, ಅವರು ಪಿಂಚಣಿದಾರರ ಮನೆಗೆ ತೆರಳುವಾಗ ನಿರ್ದಿಷ್ಟ ಮೊತ್ತದ ಹಣವನ್ನೂ ನೀಡಲಾಗುತ್ತದೆ. ಪಿಂಚಣಿದಾರ ತನ್ನ ಖಾತೆಯಿಂದ ಪಡೆಯಬೇಕಾದ ಮೊತ್ತವನ್ನು ಹೇಳಿದ ಬಳಿಕ ಆ್ಯಪ್ ಮೂಲಕ ಖಾತೆಯ ಪುಟ ತೆರೆದು ದಾಖಲಿಸಲಾಗುತ್ತದೆ. ಬಯೋಮೆಟ್ರಿಕ್ ಡಿವೈಸ್ ಮೂಲಕ ಪಿಂಚಣಿದಾರರ ಹೆಬ್ಬೆಟ್ಟು ಪಡೆದಾಗ ಅದು ಪೂರ್ವನಿಗದಿತ ಆಧಾರ್ ಲಿಂಕ್ನ ಆಧಾರದಲ್ಲಿ ಹಣ ಡ್ರಾ ಪ್ರಕ್ರಿಯೆಗೆ ಸಮ್ಮತಿ ನೀಡುತ್ತದೆ. ಅದರಂತೆ ನಗದನ್ನು ಖಾತೆದಾರನಿಗೆ ನೀಡಿ, ಖಾತೆಯಲ್ಲಿ ಉಳಿದಿರುವ ಮೊತ್ತದ ಮಾಹಿತಿಯನ್ನೂ ನೀಡಲಾಗುತ್ತದೆ.