ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮಹತ್ವದ ಏರುಪೇರು ಕಂಡುಬಂದಿದೆ. ಮುಂಬರುವ ಎರಡು ದಿನಗಳ ಹವಾಮಾನ ಮುನ್ಸೂಚನೆಯು ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಪರಿಸ್ಥಿತಿಗಳನ್ನು ಸೂಚಿಸಿದೆ.
ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿದರೆ, ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 9 ರಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನವು ಸಂಪೂರ್ಣವಾಗಿ ಒಣಗಿರಲಿದ್ದು, ಮಳೆಯ ಯಾವುದೇ ಲಕ್ಷಣಗಳಿಲ್ಲ. ಆದರೆ ದಕ್ಷಿಣ ಒಳನಾಡಿನ ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಭಾಗದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಜೊತೆಗೆ, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ ಬೀಸುವ ಸಂಭವವಿದೆ. ಗುಡುಗು-ಮಿಂಚಿನ ಅಬ್ಬರವೂ ಇರಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಲಾಗಿದೆ.
ಏಪ್ರಿಲ್ 10 ರಂದು ರಾಜ್ಯದ ಜನತೆಗೆ ಮಳೆಯಿಂದ ದೊಡ್ಡ ಸಮಾಧಾನ ಸಿಗಲಿದೆ. ರಾಜ್ಯಾದ್ಯಂತ ಮಳೆ ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂದು ಹವಾಮಾನ ತಿಳಿಸಿವೆ. ಆದರೆ, ಮಳೆಯ ಬದಲು ತಾಪಮಾನದ ಹೊಡೆತ ಜನರನ್ನು ಹೈರಾಣಾಗಿಸಲಿದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಇಲ್ಲಿ ಮಳೆಯ ಬದಲು ‘ಹಾಟ್ ಅಂಡ್ ಹ್ಯುಮಿಡ್’ ಅಂದರೆ ವಿಪರೀತ ಬಿಸಿಲು ಮತ್ತು ತೇವಾಂಶ ಭರಿತ ವಾತಾವರಣ ಇರಲಿದೆ. ಹಗಲಿನ ಉಷ್ಣಾಂಶವು 34°C ನಿಂದ 38°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ತೇವಾಂಶದ ಪ್ರಭಾವದಿಂದಾಗಿ ಮನುಷ್ಯನ ದೇಹಕ್ಕೆ ಈ ಉಷ್ಣಾಂಶವು ಸುಮಾರು 45°C ಗಿಂತಲೂ ಹೆಚ್ಚಿನ ಬಿಸಿಲಿನ ಅನುಭವ ನೀಡಲಿದೆ.

