ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಭರದಲ್ಲಿ, ಅವರು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚುವ ಮೂಲಕ ಅಪಾಯಕಾರಿ ಹುಚ್ಚಾಟ ಮೆರೆದಿದ್ದಾರೆ.
ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುವ ಮತ್ತು ಶಾಂತಿ ಕದಡುವ ಇಂತಹ ಬೇಜವಾಬ್ದಾರಿ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರಜತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ಇವರು, ಈಗ ಮತ್ತೆ ಕಾನೂನು ಕ್ರಮ ಎದುರಿಸುತ್ತಿದ್ದಾರೆ.
ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ರಜತ್ ಏಪ್ರಿಲ್ 24ರ ರಾತ್ರಿ 10ರಿಂದ 11 ಗಂಟೆಯ ಸುಮಾರಿಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪೆಟ್ರೋಲ್ ತುಂಬಿಸಿ, ಸಾರ್ವಜನಿಕ ರಸ್ತೆಯಲ್ಲೇ ಸ್ಫೋಟಿಸಿ ರಜತ್ ಅಟ್ಟಹಾಸ ಮೆರೆದಿದ್ದ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಾ, ಬಾಂಬ್ ಸ್ಫೋಟಿಸಿದ ರೀತಿ ರಸ್ತೆಯ ಮೇಲೆ ಬೆಂಕಿ ಹಚ್ಚಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಕಗ್ಗಲೀಪುರ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪೆಟ್ರೋಲ್ ಬಾಂಬ್ ಸ್ಫೋಟದಿಂದ ಸಾರ್ವಜನಿಕರಿಗೆ ಆತಂಕ, ವಾಹನ ಸವಾರರಿಗೆ ತೊಂದರೆ, ರಸ್ತೆಯು ಕಪ್ಪಾಗಿದ್ದು, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ರಜತ್ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಜತ್‌ಗೆ ನೋಟೀಸ್ ನೀಡಿ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ.

