ಉತ್ತರ ಪ್ರದೇಶ: ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಬರೋಬ್ಬರಿ 140 ಕೋಳಿಗಳು ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ದರಿಯಾಪುರ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಕೋಳಿ ಫಾರಂ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದರಿಯಾಪುರ ನಿವಾಸಿ ಸಾಬೀರ್ ಎಂಬುವವರು ಗ್ರಾಮದಲ್ಲಿ ಕೋಳಿ ಫಾರಂ ನಡೆಸುತ್ತಿದ್ದಾರೆ.
ಏಪ್ರಿಲ್ 25ರ ರಾತ್ರಿ ಗ್ರಾಮದ ಬಬ್ಬನ್ ವಿಶ್ವಕರ್ಮ ಎಂಬುವವರ ಮಗಳ ಮದುವೆ ಮೆರವಣಿಗೆ ಸಾಬೀರ್ ಅವರ ಫಾರಂನ ಪಕ್ಕದಲ್ಲೇ ಹಾದು ಹೋಗಿತ್ತು. ಈ ವೇಳೆ ಅತಿ ಹೆಚ್ಚಿನ ಶಬ್ದದೊಂದಿಗೆ ಡಿಜೆ ಪ್ಲೇ ಮಾಡಲಾಗುತ್ತಿತ್ತು. ಮ್ಯೂಸಿಕ್ ಸದ್ದು ಎಷ್ಟಿತ್ತೆಂದರೆ, ಅದಕ್ಕೆ ಹೆದರಿದ ಕೋಳಿಗಳು ಗಾಬರಿಯಿಂದ ಒಂದರ ಮೇಲೊಂದು ಬಿದ್ದು ಸಾವನ್ನಪ್ಪಿವೆ.
ಸಾಬೀರ್ ನೀಡಿದ ದೂರಿನನ್ವಯ ಪೊಲೀಸರು ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. “ಅತಿ ಹೆಚ್ಚಿನ ಶಬ್ದದ ತರಂಗಗಳು ಪಕ್ಷಿಗಳಲ್ಲಿ ತೀವ್ರ ಒತ್ತಡ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಈ ಪ್ರಕರಣದಲ್ಲೂ ಅದೇ ಸಂಭವಿಸಿರುವ ಸಾಧ್ಯತೆಯಿದೆ,” ಎಂದು ತಜ್ಞರು ತಿಳಿಸಿದ್ದಾರೆ.
ಬಾಲ್ಡಿರಾಯ್ ಪೊಲೀಸ್ ಠಾಣೆಯ ಅಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದ ಬಳಕೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ,” ಎಂದು ಹೇಳಿದ್ದಾರೆ.

