ದಾವಣಗೆರೆ,ಅ.2 : ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲಿಕ್ಕೆ ಹೊರೆತು ಸಂಸಾರ ನೋಡಿಕೊಳ್ಳೋಕೆ ಅಲ್ಲ ಎಂದು ಶಿಕ್ಷಕರ ವರ್ಗಾವಣೆ ವಿಚಾರವಾಗಿ ಶಿಕ್ಷಕರ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ವರ್ಗಾವಣೆಗೆ ಸರ್ಕಾರ ಕೈಗೊಂಡಿರುವ ಕ್ರಮದಿಂದ ಶಿಕ್ಷಕರು ಪರದಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು.
ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಎಲ್ಲಾ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು. ಕೆಲ ಶಿಕ್ಷಕರ ವೈಯುಕ್ತಿಕ ಸಮಸ್ಯೆಗಳನ್ನ ಸಾಮೂಹಿಕ ಎಂದು ಬಿಂಬಿಸಲಾಗದು, ಕೆಲ ಶಿಕ್ಷಕರಿಗೆ ಕೆಲಸಕ್ಕೆ ಸೇರುವಾಗಿ ಜಿಲ್ಲಾವಾರು ಆಯ್ಕೆ ಅಂತ ಗೊತ್ತಿರಲಿಲ್ಲವೇ? ಆಗ ರಾಯಚೂರು, ಮತ್ತೊಂದು ಜಿಲ್ಲಾ ದೂರ ಅಂತಾ ಗೊತ್ತಿರಲಿಲ್ವಾ ಎಂದು ನಾವು ಶಿಕ್ಷಕರನ್ನು ನೇಮಕ ಮಾಡಿರುವುದು ಪಾಠ ಮಾಡಲಿಕ್ಕೆ, ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರ ಸಮಸ್ಯೆನೂ ಅರ್ಥ ಆಗುತ್ತೆ, ಆದರೆ, ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ವ್ಯವಸ್ಥೆಗೆ ಕೋವಿಡ್ ಸವಾಲಾಗಿದ್ದು, ಕೇಂದ್ರ, ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಮೂರನೇ ಅಲೆ ಎಫೆಕ್ಟ್ ಆದ್ರೆ ಶಾಲೆ ನಿಲ್ಲಿಸಬೇಕಾ, ಬೇಡ್ವಾ ಆ ಮೇಲೆ ನಿರ್ಧಾರ ಮಾಡಲಾಗುತ್ತದೆ. ಸದ್ಯಕ್ಕೆ ದೇಶದಲ್ಲಿ ಕೊರೊನಾ ಕ್ಷೀಣಿಸುತ್ತಿದೆ. ಯಾವೂದೇ ತೊಂದರೆ ಇಲ್ಲದೇ ಶಾಲೆ ಪ್ರಾರಂಭ ಆಗಿದೆ ಎಂದರು.