ಬೆಂಗಳೂರು: ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಮೂವರಿಗೆ ಗಂಭೀರ ಗಾಯಗಳಾದ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಇಂದು ಬೆಳಗ್ಗೆ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಬಿಹಾರ ಮೂಲದ ಬಬ್ಲು, ಪಕ್ಕದ ಮನೆಯ ನಿವಾಸಿ ಲಕ್ಷ್ಮಮ್ಮ ಹಾಗೂ ಒಂಬತ್ತು ವರ್ಷದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿರುವ ಬಬ್ಲು, ಪಾನಿಪುರಿ ವ್ಯಾಪಾರಕ್ಕಾಗಿ ಈ ಸ್ಥಳದಲ್ಲಿ ಪ್ರತ್ಯೇಕ ಗೋಡೌನ್ ಬಾಡಿಗೆಗೆ ಪಡೆದುಕೊಂಡಿದ್ದ. ರಾತ್ರಿ ವೇಳೆ ಸಿಲಿಂಡರ್ ಅನಿಲ ಸೋರಿಕೆಯಾದ ಪರಿಣಾಮ ಗೋಡೌನ್‌ನೊಳಗೆ ವಿಪರೀತ ಒತ್ತಡ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ.​ ಬೆಳಗ್ಗೆ ಅದೇ ಸಮಯಕ್ಕೆ ಬಬ್ಲು ಅವರು ಬಂದು ಗೋಡೌನ್ ಬಾಗಿಲು ತೆರೆದಾಗ ಏಕಾಏಕಿ ಸ್ಫೋಟ ಸಂಭವಿಸಿದೆ. ಸದ್ಯ ಬೆಂಕಿ ನಂದಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.