ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರನ್ನು ಸಿಐಡಿ ಅಧಿಕಾರಿಗಳು 7 ದಿನ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ನ್ಯಾಯಾಲಯದ ಮುಂದೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು, ಬಸವರಾಜ್‌ ಅವರನ್ನು ಕಸ್ಟಡಿಗೆ ಪಡೆಯಲು 9 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದರು. ಕೊಲೆಯಾದ ರೌಡಿಶೀಟರ್ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು.

ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಆರೋಪಿ ಜಗದೀಶ್ ನನಗೆ ಪರಿಚಯ ಇಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದರು. ಆದರೆ ಜಗದೀಶ್ ಜೊತೆಗೆ ಕಾರ್ಯಕ್ರಮಗಳು, ಬರ್ತಡೇ, ದೇವಸ್ಥಾನ ಗಳಿಗೆ ಜೊತೆಗೆ ಹೋಗಿರೋದು ಪತ್ತೆಯಾಗಿದೆ.

ಈ ಹಿಂದೆಯೇ ಬೈರತಿ ಬಸವರಾಜ್ ಮತ್ತು ಬಿಕ್ಲು ಶಿವನಿಗೆ ಹಲವು ಬಾರಿ ಜಮೀನು ವಿವಾದಗಳಲ್ಲಿ ಗಲಾಟೆ ಆಗಿತ್ತು. ಇದಕ್ಕೆ ಪೂರಕವಾಗಿ ಅವಲಹಳ್ಳಿ, ಕೆಆರ್ ಪುರ, ಭಾರತೀನಗರ ಪೊಲೀಸ್ ಠಾಣೆಯಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರು ದಾಖಲಾಗಿತ್ತು.

ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಗದೀಶ್, ಕಿರಣ್, ಪ್ರದೀಪ್, ವಿಮಲ್, ಮದನ್, ಸ್ಯಾಮ್ಯುಯೆಲ್, ಅವಿನಾಶ್, ಅರುಣ್, ನವೀನ್, ಮುರುಗೇಶ್, ನರಸಿಂಹ, ಸುದರ್ಶನ್, ಶಿವು, ಪ್ರಸಾದ್, ಮನೋಜ್, ಫ್ಯಾಟ್ರಿಕ್ ಹಾಗೂ ಕಿರಣ್, ಅಜಿತ್ ಸೇರಿದಂತೆ 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.