ಮುಂಬೈ: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗ–4ರ ಸೇತುವೆಯ ಪ್ಯಾರಪೆಟ್ ಭಾಗ ಕುಸಿದು ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗುತ್ತಿಗೆದಾರ ಸಂಸ್ಥೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್–ಆಸ್ಟಾಲ್ಡಿ ಹಾಗೂ ಅದರ ಉಪಗುತ್ತಿಗೆದಾರ ಮಿಲನ್ ರೋಡ್ ಬಿಲ್ಡ್ಟೆಕ್ LLP ವಿರುದ್ಧ ಪ್ರಕರಣ ದಾಖಲಿಸಿ ಐವರನ್ನು ಬಂಧಿಸಲಾಗಿದೆ. ಜೊತೆಗೆ RAJVಗೆ 5 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ಸಾಮಾನ್ಯ ಸಲಹೆಗಾರರ ಒಕ್ಕೂಟವಾದ ಡಿಬಿ ಎಂಜಿನಿಯರಿಂಗ್ & ಕನ್ಸಲ್ಟಿಂಗ್, ಹಿಲ್ ಇಂಟರ್ನ್ಯಾಷನಲ್ ಇಂಕ್ ಹಾಗೂ ಲೂಯಿಸ್ ಬರ್ಗರ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (DB ಹಿಲ್ LBG) ಮೇಲೂ 1 ಕೋಟಿ ದಂಡ ವಿಧಿಸಲಾಗಿದೆ ಎಂದು MMRDA ಪ್ರಕಟಣೆಯಲ್ಲಿ ತಿಳಿಸಿದೆ.

ಶನಿವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಲ್ಬಿಎಸ್ ರಸ್ತೆಯಲ್ಲಿರುವ ಜಾನ್ಸನ್ & ಜಾನ್ಸನ್ ಕಾರ್ಖಾನೆ ಸಮೀಪ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಪ್ಯಾರಪೆಟ್ ಭಾಗ ಹಾದುಹೋಗುತ್ತಿದ್ದ ಆಟೋರಿಕ್ಷಾ ಹಾಗೂ ಸ್ಕೋಡಾ ಕಾರಿನ ಮೇಲೆ ಕುಸಿದು ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಮೆಟ್ರೋ ಲೈನ್–4 ದಕ್ಷಿಣ–ಮಧ್ಯ ಮುಂಬೈನ ವಡಾಲಾವನ್ನು ನೆರೆಯ ಥಾಣೆಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಕಾರಿಡಾರ್‌ನ ಗಮನಾರ್ಹ ಭಾಗ ಎಲ್ಬಿಎಸ್ ರಸ್ತೆಯ ಮೇಲೆಯೇ ಹಾದು ಹೋಗುತ್ತದೆ. ಘಟನೆಯ ಬಳಿಕ ನಿರ್ಮಾಣ ಕಾಮಗಾರಿಗಳ ಭದ್ರತೆ ಕುರಿತು ಕಳವಳ ವ್ಯಕ್ತವಾಗಿದೆ.

ಆಟೋರಿಕ್ಷಾದ ಹಿಂಭಾಗದಲ್ಲಿ ಕುಳಿತಿದ್ದ ರಾಮಧಾನಿ ಯಾದವ್ (46) ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ ರಾಜ್ಕುಮಾರ್ ಯಾದವ್ (45) ಗಂಭೀರವಾಗಿ ಗಾಯಗೊಂಡು ಮುಲುಂಡ್‌ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮಹೇಂದ್ರ ಪ್ರತಾಪ್ ಯಾದವ್ (52) ಹಾಗೂ ಸ್ಕೋಡಾ ಕಾರಿನ ಚಾಲಕಿ ದೀಪಾ ರುಹಿಯಾ (40) ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.