News Karnataka Kannada
Thursday, May 09 2024
ಬೆಂಗಳೂರು

ಬೆಂಗಳೂರು: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಳಿಸಲು ಪ್ರತಿಭಟನೆ

Protest to save construction workers' welfare board
Photo Credit : By Author

ಬೆಂಗಳೂರು: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪ್ರತಿ ವರ್ಷ 2000 ಸಾವಿರ ಕೋಟಿ ರೂಗಿಂತ ಹೆಚ್ಚು ಹಣ ಖರ್ಚು ಮಾಡಲು ಅನುಮೋದನೆ ನೀಡಿದ್ದು, ಇದರಿಂದ ಭಾರೀ ಸೋರಿಕೆ, ಕಮೀಷನ್ ವ್ಯವಹಾರ ಹೆಚ್ಚಾಗಲು ಕಾರಣವಾಗಿದೆ. ಮಂಡಳಿಯನ್ನು ದಿವಾಳಿ ಅಂಚಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಕಟ್ಟಡ ಕಾರ್ಮಿಕ ಮಂಡಳಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.

ಫ್ರೀಡಂ ಪಾರ್ಕ್ ಮುಂದೆ ಪ್ರತಿಭಟನಾಕಾರರು ಮಂಡಳಿಯ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಭೇಟಿ ನೀಡಿ ಸಂಘದ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದರು. ವಿಧಾನಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅನಾವಶ್ಯಕ ಯೋಜನೆಗಳನ್ನು ಜಾರಿಮಾಡಿರುವುದರಿಂದ ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ 3-4 ವರ್ಷಗಳಲ್ಲಿ ಮಂಡಳಿ ಹಣ ಖಾಲಿಯಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೇ ರೀತಿ ಭಾರಿ ಪ್ರಮಾಣದಲ್ಲಿ ಹಣ ವೆಚ್ಚ ಮಾಡಿ ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಮಂಡಳಿಗಳು ಮುಚ್ಚಿ ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಅಧ್ಯಕ್ಷ ಚಿಂತಾಮನಿ .ಜೋ. ಕೊಡಳ್ಳಿ, ಮಂಡಳಿಯಲ್ಲಿ ವಾರ್ಷಿಕ ಕ್ಯಾಲೆಂಡರ್, ಕರಪತ್ರ ಮುದ್ರಣ, ಕಳಪೆ ದರ್ಜೆ ಟೂಲ್ ಕಿಟ್‍ಗಳು, ಸುರಕ್ಷಾ ಕಿಟ್ ಗಳು, ಐ.ಇ.ಆ ಸ್ಕ್ರೀನ್ ಟಿ.ವಿ.ಗಳು, ತರಬೇತಿ ಶಿಬಿರಗಳು, ದುಂದು ವೆಚ್ಚದ ಯೋಜನೆಗಳಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಮಂಡಳಿಯಿಂದ ಸರಕಾರದ ಇತರೆ ಅಂಗ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಟೀನ್, ಅಂಬೇಡ್ಕರ್ ಸಹಾಯ ಹಸ್ತ, ನರೇಗಾ ಕಾರ್ಮಿಕರಿಗೆ ಧನಸಹಾಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಮುಂಗಡವಾಗಿ ಕೋಟಿ, ಕೋಟಿ, ರೂಪಾಯಿ ಕೊಡುವುದು ತರವಲ್ಲ ಎಂದರು.

ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಕಾರ್ಮಿಕರಿಗೆ ಧನ ಸಹಾಯ ದೊರೆತಿಲ್ಲ. ಜನಪ್ರಿಯ ಯೋಜನೆಗಳು ಚುನಾಯಿತ ರಾಜಕೀಯ ಜನಪ್ರತಿನಿಧಿಗಳ ಯೋಜನೆಗಳಾಗಿ ಮಾರ್ಪಟ್ಟಿವೆ. ರೇಷನ್ ಕಿಟ್‍ಗಳು ಜನಪ್ರತಿನಿಧಿಗಳ ಗೋದಾಮಿನಿಂದ ಹಂಚಿಕೆಯಾಗುತ್ತಿವೆ. ಕಾರ್ಮಿಕ ಇಲಾಖೆಯಲ್ಲಿ ಜನಪ್ರತಿನಿಧಿಗಳು ಬಾರಿ ಹಸ್ತಕ್ಷೇಪ ಮಾಡುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ.ಎಸ್.ನಾಡಿಗೇರ ಮಾತನಾಡಿ, ಬೆಂಗಳೂರಿನಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಬಸ್ ಪಾಸ್ ಕೊಡುತ್ತಿದ್ದು, ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು. “ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ” ಧೋರಣೆ ಕೈಬಿಡಬೇಕು.ಕೇಂದ್ರದಿಂದ ರಾಜ್ಯದ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ.ಈ ಕುರಿತು ಮಂಡಳಿ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಈ ಹೋರಾಟದ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷರಾದ ಶಂಕರ್ ಸುಲೆಗಾವ, ಅಖಿಲ ಭಾರತೀಯ ಕನ್ ಸ್ಟ್ರಕ್ಷನ್ ಮಜ್ದೂರ್ ಸಂಘದ ಹಿರಿಯ ಮುಖಂಡರಾದ ಬಸವಂತ್ ಸಾಹು ಹಾಗು ಸಿ.ಟಿ.ಪಾಟಿಲ್,ಬಿ.ಎಮ್.ಎಸ್’ನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಹಿರಿಯ ನಾಯಕರಾದ ಬಿ.ಎಸ್.ದೇಶಪಾಂಡೆ, ರಾಮಕೃಷ್ಣ ಪೂಂಜಾ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು