ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ಇಂದು (ಜೂನ್ 23) ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಬಿಬಿಎಂಪಿಯಲ್ಲಿ 2000 ಕೋಟಿ ರೂ. ಹಾಗೂ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಬಾಕಿ ಇರುವುದಾಗಿ ತಿಳಿಸಿದ ಕೆಂಪಣ್ಣ ಅವರು ತಡೆಹಿಡಿದಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು ಹಾಗೂ ನಿರಾಕ್ಷೇಪಣಾ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದು, ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.