News Karnataka Kannada
Friday, May 10 2024
ಬೆಂಗಳೂರು ನಗರ

ತುಮಕೂರು: ಸಿದ್ಧಗಂಗಾ ಮಠಕ್ಕೆ ತುಮಕೂರು ಗ್ರಾಮಾಂತರ ಶಾಸಕ ಭೇಟಿ

Tumakuru Rural MLA visits Siddaganga Mutt
Photo Credit : News Kannada

ತುಮಕೂರು: ಸಿದ್ದಗಂಗಾ ಮಠ ಒಳ್ಳೆಯ ಕೆಲಸಗಳಿಗೆ ಸ್ಪೂರ್ತಿ ನೀಡುವಂತಹ ಮಠ. ಹಾಗಾಗಿಯೇ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ನನ್ನ ಶಾಸಕ ಜವಾಬ್ದಾರಿಯನ್ನು ಇಂದಿನಿಂದ ಆರಂಭಿಸುತ್ತಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಿಳಿಸಿದರು.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ೨೦೦೮ರಲ್ಲಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿಯೂ ಡಾ. ಶ್ರೀ ಶಿವಕುಮಾರಸ್ವಾಮಿಜೀಗಳ ಆಶೀರ್ವಾದ ಪಡೆದು ಕೆಲಸ ಆರಂಭಿಸಿದ್ದೆ. ಈಗಲೂ ಕೂಡ ಅದೇ ಕೆಲಸವನ್ನು ಮುಂದುವರೆಸಿದ್ದೇನೆ ಎಂದರು.

ಸಿದ್ದಗಂಗಾ ಮಠದ ಆಶೀರ್ವಾದಿಂದ ೨೦೦೮ ಮತ್ತು ೨೦೧೩ ರಲ್ಲಿ ಶಾಸಕನಾಗಿ ಆಯ್ಕೆಯಾಗಲು ಅವಕಾಶವಾಯಿತು. ಆ ವೇಳೆ ಕ್ಷೇತ್ರದ ಜನರು ಬಹುದಿನದ ಬೇಡಿಕೆಯಾಗಿದ್ದ ಹೆಬ್ಬೂರು-ಗೂಳೂರು ಏತನೀರಾವರಿ ಜಾರಿ, ಶಾಲೆಗಳ ಅಭಿವೃದ್ದಿ, ರೈತರಿಗೆ ನಿರಂತರ ವಿದ್ಯುತ್ ಹೀಗೆ, ಹತ್ತು ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲು ಸಹಕಾರಿಯಾಯಿತು. ಇದಕ್ಕೆಲ್ಲಾ ಸ್ಫೂರ್ತಿ ನೀಡಿದ್ದು ಸಿದ್ದಗಂಗಾ ಮಠ ಎಂದರು.

ಹಿರಿಯ ಶ್ರೀಗಳಿದ್ದ ಸಂದರ್ಭದಲ್ಲಿ ಮಠಕ್ಕೆ ಬಂದರೆ ಕ್ಷೇತ್ರದ ನೀರಾವರಿ ಯೋಜನೆಗಳು, ರೈತರ ಪರವಾಗಿ ನಿಲ್ಲುವಂತೆ, ಗ್ರಾಮೀಣ ಭಾಗದಲ್ಲಿಯೂ ಉತ್ತಮ ಗುಣಮಟ್ಟದ ಶಾಲೆಗಳನ್ನು ತೆರೆದು ಬಡವರಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕೆಂದು ಶ್ರೀಗಳು ಸಲಹೆ ನೀಡುತ್ತಿದ್ದರು. ಅದರಂತೆ ಈ ಬಾರಿಯೂ ಸಹ ಉತ್ತಮವಾಗಿ ಕೆಲಸ ಮಾಡಲು ಮುಂದಾಗಿರುವುದಾಗಿ ಹೇಳಿದರು.
ಭಕ್ತರಿಂದ ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನನ್ನಂತಹ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಹಾಗಾಗಿಯೇ ಇಂದಿಗೂ ಅವರ ಗುದ್ದುಗೆಗೆ ದಿನಕ್ಕೆ ಸಾವಿರಾರು ಜನರು ಭೇಟಿ ನೀಡಿ, ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಹಾಗೆಯೇ ನಾನು ಸಹ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಇಂದಿನಿಂದ ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಕೆಲಸ ಆರಂಭಿಸಿದ್ದೇನೆ. ಹಾಗೇಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಸಹ ನನ್ನ ಮೇಲಿದೆ ಎಂದರು.

ಅಪಪ್ರಚಾರದಿಂದ ಹಿನ್ನಡೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನಗಳು ಬಂದಿವೆ. ಮುಂದಿನ ಬಾರಿ ಸರಿ ಹೋಗಲಿದೆ. ಕಾಂಗ್ರೆಸ್‌ನವರು ನಮ್ಮ ಪಕ್ಷದ ಬಗ್ಗೆ ಮಾಡಿದ ಅಪಪ್ರಚಾರದಿಂದ ಕಡಿಮೆ ಸೀಟು ಬಂದಿವೆ. ಗ್ಯಾಸ್ ಬೆಲೆ ಹೆಚ್ಚಳ, ಪಡಿತರ ಅಕ್ಕಿ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸರ್ಕಾರ ಯಾವುದಿದ್ದರೇನು, ಅನುದಾನ ತರುವ ತಾಕತ್ತು ನನಗಿದೆ. ಸರ್ಕಾರ ಒಂದು ರೀತಿಯಲ್ಲಿ ಬಾವಿಯಿದ್ದಂತೆ. ಯಾರಿಗೆ ಶಕ್ತಿ ಇದೆಯೋ ಅವರು ಹೆಚ್ಚು ನೀರು ಸೇದಿಕೊಳ್ಳುತ್ತಾರೆ. ಈ ಹಿಂದೆ ೨೦೧೩ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಕೇತ್ರದ ಅಭಿವೃದ್ದಿಗೆ ೮೦೦ ಕೋಟಿ ಅನುದಾನ ತಂದಿದ್ದೆ. ಈ ಬಾರಿಯೂ ಪ್ರಬಲ ವಿರೋಧ ಪಕ್ಷವಾಗಿ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುದಾನ ತರಲಿದ್ದೇನೆ. ನಾನು ಅನುದಾನವನ್ನು ನನ್ನ ಮನೆಗೆ ಕೇಳೋದಿಲ್ಲ. ಬಡವರಿಗೆ ಮನೆ, ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲವನ್ನು ಅದ್ಯತೆಯ ಮೇರೆಗೆ ಮಾಡಲಿದ್ದೇನೆ ಎಂದರು.

ಕ್ಷೇತ್ರವನ್ನು ಹಾಗೂ ಶಾಲೆಗಳನ್ನು ಸಿ.ಎಸ್.ಆರ್.ನಿಧಿಯಿಂದ ಅಭಿವೃದ್ದಿ ಪಡಿಸುವ ಯೋಚನೆ ಇದೆ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಒಂದೊಂದು ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆಂಬ ಮಹದಾಸೆ ಇದೆ. ಈಗಾಗಲೇ ಆಕ್ಷನ್ ಪ್ಲಾನ್ ಇದೆ. ಮಾಜಿ ಶಾಸಕರ ಕಾಲದಲ್ಲಿ ಹಾಳಾಗಿರುವ, ನೆನೆಗುದಿಗೆ ಬಿದ್ದಿರುವ ಎಲ್ಲಾ ಯೋಜನೆಗಳನ್ನು ಒಂದು ತಿಂಗಳ ಒಳಗೆ ಸರಿದಾರಿಗೆ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವತ್ತ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಸುರೇಶ್‌ಗೌಡ ಅವರು ಹಳೇ ಮಠಕ್ಕೆ ತೆರಳಿ ನೂತನ ಉತ್ತರಾಧಿಕಾರಿ ಶ್ರೀ ಶಿವ ಸಿದ್ದೇಶ್ವರ ಸ್ವಾಮಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಖಂಡರಾದ ಮೈದಾಳ ಗ್ರಾ.ಪಂ.ಅಧ್ಯಕ್ಷ ಮಾಲಾ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಕರಣ್ಣ, ಉಮಾಶಂಕರ್, ಗೂಳೂರು ಶಿವಕುಮಾರ್, ಅರಕೆರೆ ರವೀಶ್, ನಾರಾಯಣಪ್ಪ, ಗೂಳೂರು ವಿಜಯಕುಮಾರ್, ಗಂಗಾಂಜನೇಯ, ಪಂಚೆ ರಾಮಚಂದ್ರಪ್ಪ, ಊರುಕೆರೆ ಆರ್. ವಿಜಯಕುಮಾರ್, ಹೊನ್ನೇಶಕುಮಾರ್, ಹೆತ್ತೇನಹಳ್ಳಿ ವೆಂಕಟೇಶ್  ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು