News Karnataka Kannada
Saturday, May 18 2024
ಬೆಂಗಳೂರು ನಗರ

ಅರಣ್ಯದಲ್ಲಿಯೇ ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಲಭಿಸುವಂತೆ ಮಾಡಲು ಕ್ರಮ: ಸಿದ್ದರಾಮಯ್ಯ

CM announces Rs 15 lakh ex-gratia for family of woman killed in wild elephant attack
Photo Credit : Twitter

ಬೆಂಗಳೂರು: ಮಾನವ- ವನ್ಯಮೃಗಗಳ ಸಂಘರ್ಷಗಳನ್ನು ತಡೆಯುವ ಕೆಲಸವಾಗಬೇಕು. ಅರಣ್ಯ ಪ್ರದೇಶಗಳಿಂದ ಪ್ರಾಣಿಗಳು ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕಾಡು ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಅರಣ್ಯ ಪ್ರದೇಶದೊಳಗೆ ಲಭ್ಯವಾಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ “ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಕೆಲಸವಾಗಬೇಕು. ಅರಣ್ಯ ಪ್ರದೇಶದ ವಿಸ್ತೀರ್ಣಗೊಂಡರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಅರಣ್ಯ ಪ್ರದೇಶ ಹೆಚ್ಚಳದಿಂದ ಹವಾಮಾನ ವೈಪರೀತ್ಯಗಳನ್ನು ತಡೆಯಬಹುದು:

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಜವಾಬ್ದಾರಿ. ಅರಣ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾವೇರಿ ನೀರು, ಬರಗಾಲ, ಆಹಾರ ಉತ್ಪತ್ತಿ ಕೊರತೆಗಳನ್ನು ತಲೆದೋರುತ್ತದೆ. ಈ ಪರಿಸ್ಥಿತಿ ರಾಜ್ಯದ ಜಿಡಿಪಿ, ತಲಾವಾರು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ. 50 ರಷ್ಟು ಬೆಳೆ ಹಾನಿಯಾಗಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಇಂತಹ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಅರಣ್ಯ ಪ್ರದೇಶ ಹೆಚ್ಚಿದರೆ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ :

ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಯಲ್ಲಿ ಕಾರ್ಯನಿರ್ವಹಿಸುತ್ತಾ ಅರಣ್ಯ ಸಂರಕ್ಷಣೆ ಮಾಡುತ್ತಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡುವುದಲ್ಲದೆ ಕಾಡು ಬೆಳೆಸುವ ಕೆಲಸವನ್ನೂ ಮಾಡುತ್ತಾರೆ. ಅಸಾಧಾರಣ ಸೇವೆ ಮಾಡಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಉತ್ತೇಜಿಸುವ ಕೆಲಸವನ್ನು 2017 ರಿಂದ ಮಾಡಲಾಗುತ್ತಿದೆ. 2017, 2018, 2019 ರಲ್ಲಿ ನೀಡಲಾಗಿದೆ. ಎರಡು ವರ್ಷಗಳಿಂದ ಪದಕ ವಿತರಣಾ ಸಮಾರಂಭ ನಡೆದಿರಲಿಲ್ಲ. 2020 ಹಾಗೂ 21 ನೇ ಸಾಲಿನ ಪದಕ ವಿತರಣೆಯನ್ನು ಅರಣ್ಯ ಇಲಾಖೆ ವತಿಯಿಂದ 50 ಪದಕಗಳನ್ನು ವಿತರಣೆ ಮಾಡಿದೆ. 2- 3 ವರ್ಷಗಳ ಪದಕಗಳನ್ನು ಒಟ್ಟಿಗೆ ನೀಡುವ ಪರಿಪಾಠ ಇರಬಾರದು. ಪ್ರಶಸ್ತಿ ವಿಜೇತರ ಆಯ್ಕೆಯ ನಂತರ ಎರಡು ಮೂರು ವರ್ಷ ಕಾಯುವ ಅಗತ್ಯವಿಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಬೇಕೆಂದು ಅರಣ್ಯ ಸಚಿವರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವ ಪ್ರಿಯಾಂಕ ಖರ್ಗೆ, ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅ ಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು