News Karnataka Kannada
Friday, May 10 2024
ಬೆಂಗಳೂರು ನಗರ

ಸರ್ಕಾರಿ ಕಾಲೇಜಿನಲ್ಲಿ ಸಂಗೊಳ್ಳಿ ರಾಯಣ್ಣ, ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ

Statues of Sangolli Rayanna and Netaji Subhaschandra Bose to be installed in every government college
Photo Credit : News Kannada

ಬೆಂಗಳೂರು, ಜ.26: ಸಂಗೊಳ್ಳಿ ರಾಯಣ್ಣನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸ್ಥಾಪಿಸಬೇಕೆಂದು ಆದೇಶ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ (ರಿ) ವತಿಯಿಂದ ದೇವರಾಜ ಅರಸು ವೃತ್ತದ (ಖೋಡೆ ಸರ್ಕಲ್) ಬಳಿ ಆಯೋಜಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ ಅಂಗವಾಗಿ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ಮಾತನಾಡಿದರು.

ನಮ್ಮ ಮಕ್ಕಳಿಗೆ ಯಾರು ನಿಜವಾಗಿಯೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂದು ತಿಳಿಯಬೇಕು. ನಮ್ಮ ಮಕ್ಕಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನು ಗುರುತಿಸುವ ಕೆಲಸವಾಗಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡುವ ಬಗ್ಗೆ ಆ ಭಾಗದ ನಾಯಕರನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣನ ಸ್ಫೂರ್ತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಭಾರತ ಸುರಕ್ಷಿತವಾಗಿ ಇರಲಿದೆ. ಸಂಗೊಳ್ಳಿ ರಾಯಣ್ಣ ಮಾಡಿದ ಕಾರ್ಯಗಳಲ್ಲಿ ಒಂದೆರಡನ್ನಾದರೂ ನಾವು ಮಾಡಿದರೆ ದೇಶಕ್ಕೆ ಒಳಿತಾಗಲಿದೆ ಎಂದರು.

ನೀವು ಒಬ್ಬ ಸಂಗೊಳ್ಳಿ ರಾಯಣ್ಣನ ನ್ನು ನೇಣಿಗೆ ಹಾಕಿದರೆ ಪ್ರತಿ ಮನೆಯಲ್ಲಿ ಒಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ಎಂದಿದ್ದರು. ಸ್ವತಂತ್ರದ ಮೊದಲನೇ ಸ್ವಾತಂತ್ರ್ಯ ಹೋರಾಟಕ್ಕೂ 40 ವರ್ಷ ಮುನ್ನವೇ ದೇಶದ ಮೊದಲ ಸ್ವಾತಂತ್ರ್ಯ ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ್ಮ. ಅವರೆಲ್ಲರೂ ಹೋರಾಟ ಮಾಡಿರದಿದ್ದರೆ, ಇಷ್ಟು ಬೇಗ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ. ಅವರ ಸಾಹಸದ ಕಥೆ ಮಕ್ಕಳಿಗೆ ಹೇಳುವುದು ಅಗತ್ಯ. ಸ್ವತಂತ್ರ ಬಂದ ನಂತರ ಒಗ್ಗಟ್ಟಿನಿಂದ, ಮುಂದುವರೆದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಇಂದಿಗೂ ನಮ್ಮ ನಡುವೆ ಜೀವಂತ
ಸಂಗೊಳ್ಳಿ ರಾಯಣ್ಣ ಇಂದಿಗೂ ನಮ್ಮ ನಡುವೆ ಜೀವಂತವಿದ್ದಾರೆ. ಸಾವಿನ ನಂತರವೂ ನಮ್ಮ ನಡುವೆ ಇದ್ದಾರೆ. ಅವರ ಸಾಹಸ , ಶೌರ್ಯ, ಧೈರ್ಯ, ದೇಶಭಕ್ತಿಗಳ ವಿಚಾರದಲ್ಲಿ ಪ್ರೇರಣಾ ಶಕ್ತಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಸ್ಮರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಬೆಂಗಳೂರಿನ ರೈಲು ನಿಲ್ದಾಣಕ್ಕೆ ಅವರ ಹೆಸರು, ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದು ಬಹಳ ಯೋಗ್ಯ ಕೆಲಸ ವಾಗಿದೆ.ಈ ಸ್ಥಳ ಪಡೆಯಲೂ ಸಣ್ಣ ಹೋರಾಟವಾಯಿತು. ವಾಟಾಳ್ ನಾಗರಾಜ್, ರೇವಣ್ಣ ಎಲ್ಲರೂ ಸೇರಿ ಈ ಕೆಲಸವನ್ನು ಮಾಡಿದ್ದಾರೆ. 184 ಕೋಟಿ ರೂ.ಗಳ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ನಮ್ಮ ಮನವಿಯ ಮೇರೆಗೆ ರಕ್ಷಣಾ ಶಾಲೆಯನ್ನು ನೀಡಿ ಈಗಾಗಲೇ ಶಾಲೆ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನ ಶಾಲೆ ಸೇನಾನಿಗಳಿಗೆ ತರಬೇತಿ ನೀಡುವ ಶಾಲೆಯಾಗಿದೆ.ನಂದಗಡದಲ್ಲಿ ಸ್ಮಾರಕ, ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದೆ. ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿದೆ. ಇವೆಲ್ಲಾ ಬಹಳ ಅಗತ್ಯ ವಿರುವ ಕೆಲಸಗಳು ಎಂದರು.

ಅಪ್ರತಿಮ ದೇಶಭಕ್ತ
ಕ್ರಾಂತಿವೀರ ಸಂಗೊಳ್ಳಿ ಅಪ್ರತಿಮ ದೇಶಭಕ್ತ, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದ ಸ್ವತಂತ್ರ ಹೋರಾಟದ ಕಹಳೆಯನ್ನು ಕಿತ್ತೂರು ರಾಣಿ ಚನ್ನಮ್ಮನೊಂದಿಗೆ ಊದಿದ ಮಹಾಸೇನಾನಿ. ಇವರ ಸ್ಮರಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರು ಹುಟ್ಟಿದ್ದು ಆಗಸ್ಟ್ 15. ಅವರನ್ನು ನೇಣಿಗೇರಿಸಿದ ದಿನ ಜನವರಿ 26.ಭಾರತದ ಇತಿಹಾಸದಲ್ಲಿ ವಿಶಿಷ್ಟವಾದ ಎರಡು ಪ್ರವಿತ್ರ ದಿನಗಳಂದು ಸಂಗೊಳ್ಳಿ ರಾಯಣ್ಣನ ಹುಟ್ಟು ಮತ್ತು ಸಾವು ಆಗಿರುವುದು ಕಾಕತಾಳೀಯ ಎಂದರು.

ನೈತಿಕ ಶಕ್ತಿ
ಸಂಗೊಳ್ಳಿ ರಾಯಣ್ಣ ಬಹುತೇಕವಾಗಿ ದೇವರ ವಿಶೇಷ ಆಶೀರ್ವಾದ ಪಡೆದು ಹುಟ್ಟಿದವರು. ಅವರಿಗಿದ್ದ ಧೈರ್ಯ, ಶೌರ್ಯ, ದೇಶಭಕ್ತಿ, ಎಲ್ಲವೂ ಇರಬೇಕಾದರೆ, ದೇವರ ಆಶೀರ್ವಾದವಿದ್ದರೆ ಮಾತ್ರ ಸಾಧ್ಯ. ಸಂಗೊಳ್ಳಿ ರಾಯಣ್ಣ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದರೂ, ಚಿಕ್ಕಂದಿನಿಂದಲೇ ಸ್ವಾಭಿಮಾನದ ಬಗ್ಗೆ ಅಪಾರ ನಂಬಿಕೆಇಟ್ಟವರು. ಭಯಮುಕ್ತವಾದ ಬದುಕು ಆತನದು. ಸತ್ಯ, ನ್ಯಾಯ ನಿಷ್ಠುರ ವಾಗಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ದಿಟ್ಟತನದಿಂದ ಹೋರಾಡಿದ ಹಿಂದಿನ ನೈತಿಕ ಶಕ್ತಿಯಾಗಿ ಬೆಂಬಲವಾಗಿ ನಿಂತದ್ದು ಸಂಗೊಳ್ಳಿ ರಾಯಣ್ಣ ಹಾಗೂ ತಂಡದವರು. ಇಂದಿನಂತೆ ಆಧುನಿಕತೆ ಇಲ್ಲದ ಸಂದರ್ಭದಲ್ಲಿ ಧೈತ್ಯ ಬ್ರಿಟಿಷರನ್ನು ಧೈರ್ಯ, ಶೌರ್ಯ, ಸಾಹಸಗಳಿಂದ ಮಾತ್ರ.ಮೊದಲನೇ ಯುದ್ಧವನ್ನು ಕಿತ್ತೂರಿನಲ್ಲಿ ಗೆದ್ದರು. ಮೋಸದಿಂದ ಎರಡನೇ ಯುದ್ಧವನ್ನು ಸೋತ ಸಂದರ್ಭದಲ್ಲಿ ಸಾಮಾನ್ಯ ಗುಡ್ಡಗಾಡು ಜನರನ್ನು ಸೇರಿಸಿ, ಸೈನ್ಯ ಕಟ್ಟಿ ಬ್ರಿಟಿಷರನ್ನು ಸಂಗೊಳ್ಳಿ ರಾಯಣ್ಣ ಎದುರಿಸಿದ್ದರು. ಅಲ್ಪ ಸೈನ್ಯವನ್ನಿಟ್ಟುಕೊಂಡು ದೈತ್ಯ ಸೈನ್ಯವನ್ನು ಹೇಗೆ ಎದುರಿಸಬೇಕೆಂಬ ಕಲೆ ಇಡೀ ಭಾರತದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರಿಗೆ ಮಾತ್ರ ತಿಳಿದಿತ್ತು ಎಂದರು.

ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಸೆರೆ ಹಿಡಿದು, ಹುಲಿಯನ್ನು ಹಿಡಿದಿದ್ದೇವೆ. ಇನ್ನೊಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟಬಾರದು ಎಂದು ನೇಣಿಗೇರಿಸಿದರು. ಖಾನಾಪುರದ ನಂದಗಡದಲ್ಲಿ ಇದು ಜರುಗಿದಾಗ ಎಲ್ಲರ ಕಣ್ಣಿನಲ್ಲಿ ನೀರಿತ್ತು ಎಂದರು.

ಸಚಿವರಾದ ಎಂ.ಟಿ. ಬಿ. ನಾಗರಾಜ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಮಾಜಿ ಶಾಸಕ ವಾಟಾಳ್ ನಾಗರಾಜ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು