ಬೆಂಗಳೂರು: “ಹಲೋ ಅಪ್ಪ ಅಂತಾ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ತಮ್ಮ ತಂದೆಗೆ ಕರೆ ಮಾಡಿ ಮಾತಾಡಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನೇ ಅಸ್ತ್ರವಾಗಿ ಮಾಡಿಕೊಂಡ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸುಲಿಗೆಪುತ್ರನಿಂದ ಕಾಸಿಗಾಗಿ ಹುದ್ದೆ ವ್ಯವಹಾರ ಎಂದು ಕಿಡಿಕಾರಿದ್ದಾರೆ.
ಯತೀಂದ್ರ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಿಎಂ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ತಮ್ಮ ಸರ್ಕಾರಿ ನಿವಾಸ ಕಾವೇರಿಗೆ ಯತೀಂದ್ರ ಅವರನ್ನು ಕರೆಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪುತ್ರನ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ನೀನು ಬಹಿರಂಗವಾಗಿ ಮಾತನಾಡಿದ್ದು ಯಾಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕ್ಷೇತ್ರದ ಕಾರ್ಯಕರ್ತರಿಗೆ ಸಂಬಂಧಿಸಿದ ವಿಚಾರವಾದರೂ ಮಾಧ್ಯಮಗಳ ಮುಂದೆ ಮಾತನಾಡಿದ್ದು ಯಾಕೆ ಎಂದು ಕೇಳಿದ್ದಾರೆ ಎನ್ನಲಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದಿಢೀರ್ ಭೇಟಿ ಕೊಟ್ಟಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಈ ವಿಚಾರ ಬೆಂಕಿಯಂತೆ ವ್ಯಾಪಿಸಿಕೊಂಡಿದೆ.