News Karnataka Kannada
Friday, May 03 2024
ಬೆಂಗಳೂರು ನಗರ

ನಂದಿನಿ ಸಂಸ್ಥೆ ಅಭಿವೃದ್ಧಿಗೆ ನಿರ್ಮಲಾ ಕೊಡುಗೆಯೇನು, ಸಿದ್ದರಾಮಯ್ಯ ಪ್ರಶ್ನೆ

Cong releases 1st list of 124 candidates, Siddaramaiah to contest from Varuna
Photo Credit : News Kannada

ನಂದಿನಿ ಸಂಸ್ಥೆ ಮತ್ತು ಕರ್ನಾಟಕದ ಹಾಲು ಉತ್ಪಾದಕರ ಕುರಿತಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿದ್ದರಾಮಯ್ಯ ಅವರ ಪ್ರಶ್ನೆಗಳು

ಬೆಂಗಳೂರು: ದೇಶದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿದ್ದಾರೆ. ಆ ಸಭೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಿಕೊಂಡು ಹೋಗಿದ್ದರೆ ನಮಗೇನೂ ತಕರಾರುಗಳು ಇರುತ್ತಿರಲಿಲ್ಲ, ಆದರೆ ಕರ್ನಾಟಕಕ್ಕೆ ಚಿನ್ನದ ಕಿರೀಟವನ್ನೆ ತೊಡಿಸಿದ್ದೇವೆಂದು ಆತ್ಮದ್ರೋಹದ ಮಾತನಾಡಿದ್ದಾರೆ. ಕರ್ನಾಟಕಕ್ಕೆ ಅಮುಲ್ ಬಂದಿದ್ದು ರಾಜ್ಯದ ರೈತರ ನೆರವಿಗೆ ಎಂಬಂತೆ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯು ಮೊದಲಿನಿಂದಲೂ ಕರ್ನಾಟಕ ದ್ರೋಹಿ ರಾಜಕಾರಣವನ್ನೆ ಮಾಡಿಕೊಂಡು ಬಂದಿದೆ. ಅದರಲ್ಲೂ ಮೋದಿ, ಅಮಿತ್ ಶಾ ಜೋಡಿಯು ಬಿಜೆಪಿಯ ಚುಕ್ಕಾಣಿ ಹಿಡಿದ ಮೇಲಂತೂ ಕರ್ನಾಟಕದ ಆರ್ಥಿಕತೆಯನ್ನು ಹುರಿದು ಮುಕ್ಕುತ್ತಿದ್ದಾರೆ. ಇವರಿಬ್ಬರ ತಾಳಕ್ಕೆ ನಿರ್ಮಲಾ ಸೀತಾರಾಮನ್ ಆಗಾಗ ತಂಬೂರಿ ನುಡಿಸುತ್ತಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಹತ್ತಾರು ಬಾರಿ ಪ್ರಶ್ನೆಗಳನ್ನು ಕೇಳಿದ್ದೇನೆ ಆದರೂ ಅವರು ಹೇಳಿದ ಸುಳ್ಳುಗಳನ್ನೆ ಹೇಳಿಕೊಂಡು ಓಡಾಡಿದ್ದಾರೆ. ರಾಜ್ಯಕ್ಕೆ ಕೇಂದ್ರದ ಕೊಡುಗೆಗಳೇನು? ಆರ್ಥಿಕತೆ, ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದ ಬೆನ್ನಿಗೆ ಎಷ್ಟು ಸಾರಿ ಮೋದಿ ಅಮಿತ್ ಶಾ ಸರ್ಕಾರ ಇರಿದಿದೆ ಎಂಬುದರ ಗಾಯದ ಗುರುತುಗಳು ಹೇಳುತ್ತಿವೆ. ಈಗ ನಿರ್ಮಲಾ ಸೀತಾರಾಮನ್ ಅವರು ಅಮುಲ್ ಹಾಲಿಗೆ ರಾಯಭಾರಿತನ ಮಾಡಲು ಬಂದಿದ್ದಾರೆ. ಮೊದಲು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು.

1. ಜಾನುವಾರುಗಳ ಬಗ್ಗೆ ಮಾತನಾಡುವ ಬಿಜೆಪಿಯು ಕರ್ನಾಟಕದ ಜಾನುವಾರುಗಳ ಅಭಿವೃದ್ಧಿಗೆ ಏನು ಮಾಡಿದೆ? ಕೇಂದ್ರ ಪುರಸ್ಕೃ ತ ಯೋಜನೆಗಳಲ್ಲಿ ಜಾನುವಾರುಗಳಿಗೆ ಸಂಬಂಧ ಪಟ್ಟಂತೆ ಎರಡು ಮುಖ್ಯ ಕಾರ್ಯಕ್ರಮಗಳಿವೆ. ರಾಷ್ಟ್ರೀಯ ಜಾನುವಾರು ಮಿಷನ್ ಮತ್ತು ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ. ಇವುಗಳಿಗೆ ನಿರ್ಮಲಾ ಸೀತಾರಾಮನ್ ಅವರ ಸರ್ಕಾರ ಎಷ್ಟು ಹಣ ಕೊಡುತ್ತೇನೆ ಎಂದು ಹೇಳಿತ್ತು? ಮಾರ್ಚ್-2023 ರ ಅಂತ್ಯಕ್ಕೆ ರಾಜ್ಯಕ್ಕೆ ಬಿಡುಗಡೆ ಮಾಡಿದ ಅನುದಾನ ಎಷ್ಟು?

2. ರಾಷ್ಟ್ರೀಯ ಜಾನುವಾರು ಮಿಷನ್‍ಗೆ ಮೋದಿ ಸರ್ಕಾರ ಕರ್ನಾಟಕಕ್ಕೆ 9.7 ಕೋಟಿ ರೂ ಕೊಡುತ್ತೇನೆ ಎಂದು ಹೇಳಿತ್ತು, ಆದರೆ ನಯಾಪೈಸೆಯನ್ನೂ ಕೊಡಲಿಲ್ಲ ಯಾಕೆ?

3. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಗೆ 25.44 ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು 4.66 ಕೋಟಿ ರೂಗಳೆಂದು ಬೊಮ್ಮಾಯಿ ಸರ್ಕಾರದ ದಾಖಲೆಗಳು ಹೇಳುತ್ತಿವೆ. ರಾಜ್ಯದ ಜಾನುವಾರುಗಳಿಗೆ ಅತ್ಯಂತ ಗಂಭೀರವಾದ ಚರ್ಮಗಂಟು ರೋಗ ಬಂದಿತ್ತು, ಆದರೂ ನಿರ್ಮಲಾ ಸೀತಾರಾಮನ್ ಅವರು ಹಣ ಬಿಡುಗಡೆ ಮಾಡಲಿಲ್ಲ. ಇದನ್ನು ಕರ್ನಾಟಕಕ್ಕೆ ಮಾಡಿದ ದ್ರೋಹ ಎಂದು ಕರೆಯದೆ ಇನ್ನೇನು ಹೇಳಬೇಕು?

4. ಚರ್ಮಗಂಟು ಕಾಯಿಲೆ, ಪಶು ಆಹಾರಗಳ ಬೆಲೆ ಏರಿಕೆ, ಹಸು-ಎಮ್ಮೆಗಳನ್ನು ಸಾಕಲು ಸರ್ಕಾರಗಳು ಕೊಡುತ್ತಿರುವ ಕಿರುಕುಳಗಳಿಂದ ರೈತರು ಜಾನುವಾರು ಸಾಕಣೆಯ ಕುರಿತು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರತಿ ದಿನ ಸುಮಾರು 25-30 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ರೈತರಿಗೆ ಪ್ರತಿದಿನ 8-10 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ. ಆದರೂ ಮೋದಿ ಸರ್ಕಾರವಾಗಲಿ, ಬೊಮ್ಮಾಯಿ ಸರ್ಕಾರವಾಗಲಿ ರೈತರಿಗೆ ನಯಾಪೈಸೆಯಷ್ಟೂ ಪರಿಹಾರ ಕೊಡಲಿಲ್ಲ ಯಾಕೆ?

5. ಹಿಂಡಿ ಸೇರಿದಂತೆ ಜಾನುವಾರು ಆಹಾರ, ಪಶು ಚಿಕಿತ್ಸೆಗೆ ಬಳಸುವ ಔಷಧಗಳಿಗೆ ವಿಪರೀತ ಜಿಎಸ್‍ಟಿ ವಿಧಿಸಲಾಗುತ್ತಿದೆ. ಅದನ್ನು ನಿಲ್ಲಿಸಿ ಎಂದು ನಾನು ಅನೇಕ ತಿಂಗಳುಗಳಿಂದ ಒತ್ತಾಯಿಸುತ್ತಿದ್ದೇನೆ, ಆದರೂ ನಿರ್ಮಲಾ ಸೀತಾರಾಮನ್ ಅವರು ಯಾವುದೆ ಕ್ರಮ ತೆಗೆದುಕೊಂಡಿಲ್ಲ ಯಾಕೆ?

6. ಕರ್ನಾಟಕದಲ್ಲಿ ನಿರಂತರ ಪ್ರವಾಹ ಬಂದು ಜಾನುವಾರು ಮರಣ ಹೊಂದಿದವು. ರೈತರಿಗೆ ವಿಪರೀತ ನಷ್ಟವಾಯಿತು. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿ ಎಂದು ಮೆಮೊರಾಂಡಮ್ ಕೊಟ್ಟರೆ ಕೇಳಿದ ಅರ್ಧದಷ್ಟು ಹಣವನ್ನೂ ಯಾಕೆ ಬಿಡುಗಡೆ ಮಾಡಲಿಲ್ಲ?

7. ಚಿಕ್ಕಭಳ್ಳಾಪುರದ ಗೋಶಾಲೆಯೊಂದಕ್ಕೆ ಮೇವು ಸರಬರಾಜು ಮಾಡಿದ್ದಕ್ಕೆ ಹಣ ಬಿಡುಗಡೆ ಮಾಡಲು 40 ಶೇ. ಗೂ ಹೆಚ್ಚು ಲಂಚ ಕೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಯಿತು, ಆದರೂ ಬಿಜೆಪಿ ಸರ್ಕಾರಗಳು ಯಾವುದೆ ಕ್ರಮ ತೆಗೆದುಕೊಳ್ಳಲಿಲ್ಲ ಏಕೆ?

8. ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಪ್ರತಿ ಲೀಟರಿಗೆ 5 ರೂಗೆ ಹೆಚ್ಚಿಸಿದ್ದೆ ಆದರೆ ಬಿಜೆಪಿ ಸರ್ಕಾರ ಒಂದೆ ಒಂದು ರೂಪಾಯಿಯನ್ನೂ ಹೆಚ್ಚಿಸಲಿಲ್ಲ ಯಾಕೆ?

9. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ಗಳ ಜೊತೆ ಹಾಲು ಮತ್ತಿತರ ಹೈನು ಪದಾರ್ಥಗಳ ವ್ಯಾಪಾರ ಮಾಡಲು ಕಾರ್ಪೊರೇಟ್ ಬಂಡವಾಳಿಗರ ಜೊತೆ ಆರ್‍ಸಿಇಪಿ ಎಂಬ ಒಪ್ಪಂದ ಮಾಡಿಕೊಳ್ಳಲು ಮೋದಿ ಸರ್ಕಾರ ಮಾತುಕತೆ ಮಾಡಿದ್ದು/ ಈಗಲೂ ಕೆಲವು ಕಾರ್ಪೊರೇಟ್ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ಸುಳ್ಳೆ?

10. ಸಹಕಾರ ವ್ಯವಸ್ಥೆಯು ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಅದರೆ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಸ್ಥಾಪಿಸಿ ಅಮಿತ್ ಶಾ ಅವರನ್ನು ಮಂತ್ರಿ ಮಾಡಿದ್ದರ ಹಿಂದಿನ ಮರ್ಮ ಏನು?

11. ಅಮಿತ್‍ಶಾ ಅವರು 2022 ರ ಡಿಸೆಂಬರ್‍ನಲ್ಲಿ ಬಹುರಾಜ್ಯಗಳ ಸಹಕಾರಿಗಳ ನಿರ್ವಹಣೆ ಮತ್ತು ನಿಯಂತ್ರಣಗಳ ಬಗ್ಗೆ ಮಸೂದೆ ತಂದಿದ್ದು ಯಾಕೆ? ನಮ್ಮ ರಾಜ್ಯದ ಹಾಲು ಮುಂತಾದ ಸಹಕಾರಿ ಸಂಘಗಳನ್ನು ನಾಶ ಮಾಡುವುದು ತಾನೆ ಇದರ ಹಿಂದಿನ ಉದ್ದೇಶ?

12. 2022 ರ ಡಿಸೆಂಬರಿನಲ್ಲಿ ಮಂಡ್ಯದ ಗೆಜ್ಜಲಗೆರೆಯಲ್ಲಿ ಅಮುಲ್-ನಂದಿನ ವಿಲೀನದ ಪ್ರಸ್ತಾಪವನ್ನು ಅಮಿತ್ ಶಾ ಅವರು ಮಾಡಿದ್ದು ಯಾಕೆ?

13. ನಂದಿನಿ ಮೊಸರಿನ ಮೇಲೆ ದಹಿ ಎಂದು ಹಿಂದಿಯಲ್ಲಿ ಮುದ್ರಿಸಲು ಆದೇಶ ಹೊರಡಿಸಿದ್ದು ಏಕೆ? ಬೆಂಗಳೂರಿನಲ್ಲಿ ಹಾಲು ಮತ್ತು ಹಾಲಿನ ಕೃತಕ ಅಭಾವ ಸೃಷ್ಟಿಯಾಗಲು ಕಾರಣವೇನು?

14. ನಂದಿನಿಯಲ್ಲಿ ನಡೆಸುತ್ತಿರುವ ನೇಮಕಾತಿಗೂ ಗುಜರಾತಿನ ಕಂಪೆನಿಯೆ ಏಕೆ ಬೇಕು?

ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಂತರ ನಮ್ಮ ನಂದಿನಿಯ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು