News Karnataka Kannada
Saturday, April 27 2024
ಬೆಂಗಳೂರು ನಗರ

ಕಾಂಗ್ರೆಸ್ ಪಕ್ಷ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ- ಡಿ.ಕೆ. ಶಿವಕುಮಾರ್

Minister who called for siddaramaiah's ouster should be arrested: DK Shivakumar
Photo Credit : News Kannada

ಬೆಂಗಳೂರು: ರಾಜ್ಯದ ಜನ ಕಾಂಗ್ರೆಸ್ ಪರ ಒಲವು ತೋರುತ್ತಿದ್ದು, ಕಾಂಗ್ರೆಸ್ ಪಕ್ಷ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ. ಈ ಕಾರಣಕ್ಕೆ ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ನಿನ್ನೆ ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರನ್ನು ಪಕ್ಷದ ಎಲ್ಲಾ ನಾಯಕರ ಪರವಾಗಿ ಸ್ವಾಗತಿಸುತ್ತೇನೆ.

ಗೋಪಾಲಕೃಷ್ಣ ಅವರು ಯಾವುದೇ ಷರತ್ತು ಇಲ್ಲದೆ, ಪಕ್ಷದ ಕಾರ್ಯಕರ್ತನಾಗಿ ದುಡಿಯಲು ಸಿದ್ಧನಿದ್ದೇನೆ ಎಂದು ನಮ್ಮ ಬಳಿ ಇಚ್ಛೆ ವ್ಯಕ್ತಪಡಿಸಿದರು. ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದಾಗ ನೀವು ಈಗಾಗಲೇ ಶಾಸಕರಾಗಿದ್ದು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂದು ನಾನು ಕೇಳಿದೆ. ಅದಕ್ಕೆ ಅವರು ಉತ್ತರಿಸಿ, ‘ ನಾನು ಬಿಜೆಪಿಯನ್ನು ನೋಡಿದ್ದೇನೆ. ನಾನು ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯಬೇಕು ಅದಕ್ಕಾಗಿ ನಾನು ಕಾಂಗ್ರೆಸ್ ಸೇರಲು ಬಯಸುತ್ತೇನೆ’ ಎಂದರು. ಇವರ ಸಹೋದರ ನ್ಯಾಯಾಧೀಶರಾಗಿದ್ದರೂ, ಸಂಸತ್ತಿನ ಸದಸ್ಯರಾಗಿದ್ದರು. ಅವರು ನೀನು ಬಿಜೆಪಿಗೆ ಹೋಗಿದ್ದರೂ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತೇನೆ ಎಂದಿದ್ದರು. ಈ ರೀತಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬೆರೆತಿರುವ ನಾಯಕರು ಮತ್ತೆ ತಮ್ಮ ಮನೆಗೆ ಮರಳಿದ್ದಾರೆ. ಅವರ ಜತೆ ಸಾವಿರಾರು ಕಾರ್ಯಕರ್ತರು ಇಂದು ಪಕ್ಷ ಸೇರುತ್ತಿದ್ದಾರೆ. ಇಲ್ಲಿರುವ ಎಲ್ಲರೂ ಮೊದಲು ಕಾರ್ಯಕರ್ತರು, ನಂತರ ನಾಯಕರಾಗಿದ್ದಾರೆ.

ಇನ್ನು ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, 9ರಂದು ತಮ್ಮ ಕ್ಷೇತ್ರದಲ್ಲಿ ಪಕ್ಷ ಸೇರಲು ಕೋರಿದ್ದಾರೆ. ಪಕ್ಷಕ್ಕೆ ಅರ್ಜಿ ಹಾಕುವಂತೆ ನಾವು ಸೂಚನೆ ನೀಡಿದ್ದೇವೆ.

ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರ ಮಾತು ನೆನಪಾಗುತ್ತಿದೆ. ಹೋರಾಟ ಸಾಗಾರ ಸಾವಿರಾರು ನದಿಗಳು ಸೇರಿದಂತೆ ಎಂದು ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಎಂದರೆ ಹೋರಾಟದ ಸಾಗರವಾದರೆ ಈ ಪಕ್ಷಕ್ಕೆ ಸೇರುತ್ತಿರುವ ಶಾಸಕರು, ನಾಯಕರು ನದಿಯಾಗಿದ್ದಾರೆ.

ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ವಿರೋಧಿಸಿ ರಾಜ್ಯದ ಜನ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮೂರ್ನಾಲ್ಕು ಬಾರಿ ಶಾಸಕರಾಗಿದ್ದ ನಾಯಕರೆಲ್ಲರೂ ತಮ್ಮ ಅಧಿಕಾರ ಅವಧಿ ಇದ್ದರೂ ಅದನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪುಟ್ಟಣ್ಣ ಅವರು ಪರಿಷತ್ ನಲ್ಲಿ ನಾಲ್ಕು ವರ್ಷ ಅಧಿಕಾರ ಹೊಂದಿದ್ದರು, ಬಾಬುರಾವ್ ಚಿಂಚನಸೂರು ಅವರು ಕೂಡ ಅಧಿಕಾರ ಅವಧಿ ಇತ್ತು. ಗೋಪಾಲಕೃಷ್ಣ ಅವರು ಕೂಡ ಈಗ ಬಂದಿದ್ದಾರೆ. ದಳದಿಂದ ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಡಬಲ್ ಇಂಜಿನ ಸರ್ಕಾರದಿಂದ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದು ಜನ ರಾಜ್ಯದಲ್ಲಿ ಬದಲಾವಣೆಗೆ ತೀರ್ಮಾನ ಮಾಡಿದ್ದಾರೆ.

ಬೀದರ್ ನಿಂದ ಚಾಮರಾಜನಗರದವರೆಗೂ ಅನೇಕ ಮಾಜಿ ಹಾಗೂ ಹಾಲಿ ಶಾಸಕರು ಪಕ್ಷ ಸೇರುತ್ತಿದ್ದಾರೆ. ಈ ಬಗ್ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿದ್ದೇವೆ. ಅನೇಕ ನಾಯಕರು ರಾಜೀನಾಮೆ ನೀಡಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಈಗ ಅವರ ಹೆಸರು ಹೇಳಲು ಬಯಸುವುದಿಲ್ಲ. ಅರ್ಜಿ ಬಂದ ನಂತರ ಉಳಿದ ವಿಚಾರ ಮಾತನಾಡುತ್ತೇವೆ. ಪಕ್ಷಕ್ಕೆ ಬರುವವರೆಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹಳ ಸೂಕ್ಷ್ಮವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ನೈತಿಕ ಪೊಲೀಸ್ ಗಿರಿ ಹತ್ಯೆಗೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆ:

ನನ್ನ ಕ್ಷೇತ್ರದ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ. ಪೊಲೀಸರು ಈ ವಿಚಾರವಾಗಿ ದೂರು ದಾಖಲಿಸಿಕೊಳ್ಳುವವರೆಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಸ್ಥಳೀಯವಾಗಿ ನಮ್ಮ ನಾಯಕರು ಅಲ್ಲಿ ಕಾರ್ಯಪ್ರವೃತ್ತರಾಗಿ ನಮಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ.

ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದು, ಈ ನೈತಿಕ ಪೊಲೀಸ್ ಗಿರಿಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ. ಕಾರಣ ಅವರು ಈ ಹಿಂದೆ ನೈತಿಕ ಪೊಲೀಸ್ ಗಿರಿಗೆ ಅವರು ಬೆಂಬಲ ನೀಡಿದ್ದರು. ರೈತ ಜಾನುವಾರುಗಳನ್ನು ಸಂತೆಯಲ್ಲಿ ಖರೀದಿಸಿದ ರಸೀದಿ ಇದ್ದರೂ ಅವನಿಗೆ 2 ಲಕ್ಷ ಹಣದ ಬೇಡಿಕೆ ಇಟ್ಟು, ಹತ್ಯೆ ಮಾಡಿದ್ದಾರೆ.

ಈ ಕೊಲೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಅವರನ್ನು ಬಂಧಿಸದೇ ಅವರನ್ನು ರಕ್ಷಣೆ ಮಾಡಿದರೆ, ಇದಕ್ಕೆ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅವನನ್ನು ಕೂಡಲೇ ಬಂಧಿಸಬೇಕು.

ಪ್ರಶ್ನೋತ್ತರ

ಕಳೆದ ಒಂದು ತಿಂಗಳಿಂದ ಅನೇಕ ಹಿರಿಯ ನಾಯಕರು ಪಕ್ಷ ಸೇರುತ್ತಿದ್ದು, ಅವರಿಗೆ ಟಿಕೆಟ್ ನೀಡದಿದ್ದರೆ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಲಾಗುವುದು ಎಂದು ಕೇಳಿದಾಗ, ‘ನಾವು ಯಾರಿಗೂ ಯಾವುದೇ ರೀತಿಯ ಭರವಸೆ ನೀಡಿಲ್ಲ. ಆದರೂ ನಮ್ಮ ಪಕ್ಷ ಸೇರಲು ಅಪಾರ ಬೇಡಿಕೆ ಇದೆ. ನಾವು ಎಲ್ಲರ ಹೆಸರುಗಳನ್ನು ಪರಿಶೀಲಿಸಿ, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಿದ್ದರೆ ಸೇರಿಸಿಕೊಳ್ಳುತ್ತೇವೆ. ಗೋಪಾಲಕೃಷ್ಣರಂತಹ ನಾಯಕರು ನಾವು ಕಾರ್ಯಕರ್ತರಾಗಿ ದುಡಿಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಅವರು ಟಿಕೆಟ್ ಗೆ ಅರ್ಜಿ ಹಾಕಿದರೆ, ನಾವು ಅವರ ಅರ್ಜಿ ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.

ನೀವು ಅರ್ಜಿ ಆಹ್ವಾನಿಸಿ 2 ಲಕ್ಷ ಹಣ ಪಡೆದು ಈಗ ಹೊಸಬರು ಬಂದಾಗ ಅವರಿಗೆ ಟಿಕೆಟ್ ನೀಡಿದರೆ, ಮೋಸ ಮಾಡಿದಂತೆ ಆಗುವುದಿಲ್ಲವೇ ಎಂದು ಕೇಳಿದಾಗ, ‘ಇದರಲ್ಲಿ ಮೋಸವೇನಿದೆ? ಕಾಂಗ್ರೆಸ್ ಪಕ್ಷಕ್ಕೆ ದೇವಾಲಯದಂತಿರುವ ಪಕ್ಷದ ಕಟ್ಟಡ ಕಟ್ಟಲು ಆ ಹಣ ವಿನಿಯೋಗಿಸಲಾಗುವುದು. ಅರ್ಜಿಗೆ ಶುಲ್ಕವಾಗಿ 5 ಸಾವಿರ ತೆಗೆದುಕೊಂಡಿದ್ದು, ಉಳಿದ 2 ಲಕ್ಷ ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಸ್ವೀಕರಿಸಲಾಗಿದೆ. ಪಕ್ಷದಲ್ಲಿ ಪ್ರಬಲ ಸ್ಪರ್ಧೆ ಇದ್ದಾಗಲೇ ಬಿಜೆಪಿಗೆ ಬಿಸಿ ಗೊತ್ತಾಗುತ್ತದೆ. ಆರೋಗ್ಯಕರ ಸ್ಪರ್ಧೆ ಇರಬೇಕು. ಪಕ್ಷದೊಳಗೆ ಹೋರಾಟ ಮಾಡುತ್ತಾರೆ. ನಂತರ ಬಿಜೆಪಿ ಹಾಗೂ ದಳದ ವಿರುದ್ಧ ಹೋರಾಟ ಮಾಡುತ್ತಾರೆ’ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಕೋಲಾರ ಕಾರ್ಯಕ್ರಮದ ವೇಳಾಪಟ್ಟಿ ಬದಲಾಗಲಿದೆಯೇ ಎಂದು ಕೇಳಿದಾಗ, ‘ನಾವು 9 ಅಥವಾ 10 ರ ದಿನಾಂಕ ನೀಡಿದ್ದು, ಎಐಸಿಸಿ ಅವರ ಪ್ರವಾಸಪಟ್ಟಿ ಬಿಡುಗಡೆ ಮಾಡಲಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಹೀಗಾಗಿ ಎಐಸಿಸಿ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡಲಿದೆ. ಆದರೆ ಇಲ್ಲಿ ನಮ್ಮ ತಯಾರಿ ಸಾಗುತ್ತಿದೆ. ನಿನ್ನೆ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಕೋಲಾರಕ್ಕೆ ಭೇಟಿ ನೀಡಿದ್ದರು. ಈಗಲೂ ಸುರ್ಜೆವಾರ ಅವರು ತುಮಕೂರಿನಲ್ಲಿದ್ದು, ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇದೊಂದು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಲಿದ್ದು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಯಾವುದೇ ಗಲಭೆ ಮಾಡಿಸುತ್ತಿಲ್ಲ. ಇದೆಲ್ಲವೂ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಮುಸಲ್ಮಾನರ ಮೀಸಲಾತಿ ಕಿತ್ತುಹಾಕಿ ನಮಗೆ ನೀಡಿ ಎಂದು ಒಕ್ಕಲಿಗರು, ಲಿಂಗಾಯತರು ಕೇಳಿದ್ದರಾ? ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಕೆಲವು ಸಮುದಾಯದವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಕೇಳಿವೆ. ಈ ಸರ್ಕಾರ ಸಂವಿಧಾನಬದ್ಧವಾಗಿ ಕೆಲಸ ಮಾಡಿ ಎಲ್ಲಾ ವರ್ಗದವರನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಈಗ ಅವರ ಹಕ್ಕು ಕಸಿಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಈ ಎಲ್ಲ ವರ್ಗಗಳ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಲಾಭದ ನಡೆಗೆ ರಾಜ್ಯ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಹಿಂದುಳಿದ ಮೀಸಲಾತಿ ವರ್ಗಕ್ಕೆ ಸೇರಿಸಿ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೂ ಈ ಸರ್ಕಾರ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕೆ ಕಳಂಕ ತಂದು ಎಲ್ಲ ಸಮಾಜದವರು ಪರಸ್ಪರ ಕಿತ್ತಾಡುವಂತೆ ಮಾಡಿದ್ದಾರೆ. ಇದೆಲ್ಲದಕ್ಕೂ ಮುಖ್ಯಮಂತ್ರಿಗಳೇ ನೇರ ಕಾರಣ’ ಎಂದರು.

ಪುಲಕೇಶಿ ನಗರದಲ್ಲಿ ಪಕ್ಷದ ತೀರ್ಮಾನವೇನು ಎಂದು ಕೇಳಿದಾಗ, ‘ಪಕ್ಷದ ಕಾರ್ಯಕರ್ತು, ನಾಯಕರು ನಮ್ಮ ಜತೆ ಅವರ ಅಬಿಪ್ರಾಯ ವ್ಯಕ್ತಪಡಿಸುತ್ತಾರೆ. ಅದಕ್ಕೆ ಗೊಂದಲವಿದೆ ಎಂದು ಭಾವಿಸಬಾರದು. ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಪಕ್ಷ ನಮ್ಮದಲ್ಲ. ನಮ್ಮದು ಪ್ರಜಾಸತಾತ್ಮಕ ಪಕ್ಷ. ಎಲ್ಲರೂ ತಮ್ಮ ನೋವು, ಕಷ್ಟ, ಸುಖ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸದಿಂದ 10-15 ಮಂದಿ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ’ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು