ಬೆಂಗಳೂರು: ಅತ್ತಿಬೆಲೆಯಲ್ಲಿ ಪಟಾಕಿ ಸ್ಫೋಟ ದುರಂತದ ಬಳಿಕ ಸರ್ಕಾರ ಪಟಾಕಿ ಮಾರಾಟ, ಮತ್ತು ಸಿಡಿಸುವ ಬಗ್ಗೆ ಮಹತ್ವದ ಆದೇಶ ನೀಡಿದೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಇನ್ನುಳಿದಂತೆ ಗಣೇಶ ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಟಾಕಿ ಸಿಡಿಸುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಅತ್ತಿಬೆಲೆ ಪಟಾಕಿ ದುರಂತ ಸಂಬಂಧ ನಡೆದ ಸಭೆಯ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಮಾಲೀನ್ಯಕಾರ ಪಟಾಕಿಗೆ ಸಿಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವಂತೆ ಸೂಚಿಸಲಾಗಿದೆ. ಪಟಾಕಿ ಸಿಡಿಸುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದೆ. ದೀಪಾವಳಿ ಸಮೀಪವೇ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ ಎಂದರು.
ಪಟಾಕಿ ಅಗ್ನಿ ದುರಂತ ತಡೆ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಮಸ್ವಾಮಿ ರೆಡ್ಡಿ ಎಂಬಾತ ಪಟಾಕಿ ಮಾರಾಟಕ್ಕೆ ಅನುಮತಿ ಪಡೆದಿದ್ದ. ಗೋಡೌನ್ನಲ್ಲಿ ಮಿತಿ ಮೀರಿ ಪಟಾಕಿ ಸಂಗ್ರಹಕ್ಕೆ ಅನುಮತಿ ಪಡೆದಿರಲಿಲ್ಲ. ಹೀಗಾಗಿ ತಹಶೀಲ್ದಾರ್, ಇನ್ಸ್ಪೆಕ್ಟರ್, ಅಗ್ನಿಶಾಮಕ ಅಧಿಕಾರಿಯನ್ನು ಅಮಾನತಿಗೆ ಆದೇಶಿಸಲಾಗಿದ್ದು, ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ ಎಂದರು.
ಪಟಾಕಿ ಮಾರಾಟ ಪರವಾನಗಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಒಮ್ಮೆ ಪರವಾನಗಿ ಪಡೆದರೆ 5 ವರ್ಷದ ಬಳಿಕ ನವೀಕರಣಕ್ಕೆ ಅವಕಾಶವಿತ್ತು. ಇನ್ಮುಂದೆ ಪ್ರತಿವರ್ಷ ಪಟಾಕಿ ಮಾರಾಟ ಪರವಾನಗಿ ನವೀಕರಣಗೊಳಿಸಬೇಕು. ಆದೇಶ ಪಾಲನೆ ಮಾಡದಿದ್ದರೆ ಕಠಿಣ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.