News Karnataka Kannada
Wednesday, May 15 2024
ಬೆಂಗಳೂರು ನಗರ

ಕೇಂದ್ರ ಬರ ನಿರ್ವಹಣೆ ಕೈಪಿಡಿಯಿಂದಲೇ ಬರಗಾಲ ಘೋಷಣೆ ವಿಳಂಬ: ಸಿಎಂ ಸರಣಿ ಟ್ವೀಟ್‌

CM announces Rs 15 lakh ex-gratia for family of woman killed in wild elephant attack
Photo Credit : Twitter

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಸ್ಥಿತಿಯಿದೆ. ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಬವಣೆ ಎದುರಾಗಿದೆ. ಅದೇ ರೀತಿ ಕಾವೇರಿ ನದಿ ನೀರಿನ ವಿವಾದ ಜೋರಾಗಿದೆ. ಈ ನಿಟ್ಟಿನಲ್ಲಿ ಬರಗಾಲ ಘೋಷಣೆ ಕುರಿತು ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ -2020 ಮಾನದಂಡಗಳಲ್ಲಿನ ಸಮಸ್ಯೆಗಳ ಕುರಿತು ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿದ್ದರು. ಈ ಮಾನದಂಡದ ಕಾರಣದಿಂದಲೇ ಬರಗಾಲ ಘೋಷಣೆ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ. ಮಾನದಂಡಗಳಲ್ಲಿನ ಬದಲಾವಣೆ ಕೇವಲ ಕರ್ನಾಟಕ ರಾಜ್ಯದ ದೃಷ್ಟಿಯಿಂದ ಮಾತ್ರವಲ್ಲ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವಾದ ಭಾರತ ಗಣರಾಜ್ಯದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ.

ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.

ಕರ್ನಾಟಕವು ವೈವಿಧ್ಯಮಯವಾದ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ. ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

ಪ್ರಸಕ್ತ ಬರ ಘೋಷಣೆಯ ಮಾನದಂಡಗಳು ಹವಾಮಾನಶಾಸ್ತ್ರೀಯ, ಕೃಷಿ ಹಾಗೂ ಜಲಶಾಸ್ತ್ರೀಯ ಬರಗಳ ಸೂಚ್ಯಂಕಗಳನ್ನು ತನ್ನ ಮಾನದಂಡಗಳಲ್ಲಿ ಕ್ರೋಢೀಕರಿಸಿಕೊಂಡಿದೆ. ಆದರೆ, ಸದಾಕಾಲವೂ ಇದು ಅನ್ವಯ ಯೋಗ್ಯವೆಂದೇನೂ ಅಲ್ಲ. ಹವಾಮಾನ ಶಾಸ್ತ್ರೀಯ ಬರವನ್ನು ಪರಿಗಣಿಸಿಯೇ ನೋಡುವುದಾದರೆ, ಮುಂಗಾರಿನಲ್ಲಿ ಆರಂಭದಲ್ಲಿ ಮಳೆ ಕೊರತೆ ಇದ್ದದ್ದು ಆನಂತರ ಪ್ರಬಲ ಮಾರುತಗಳ ಪರಿಣಾಮ ಸುಧಾರಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚು ಘಟಿಸಿದೆ. ಆಗಸ್ಟ್-ಸೆಪ್ಟೆಂಬರ್‌ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಪ್ರಮಾಣ ಇಳಿಕೆಯಾಗಿರುತ್ತದೆ. ಪರಿಣಾಮ ಬೆಳೆಯಲ್ಲಿ ಕೊರತೆಯುಂಟಾಗಿ ಕೃಷಿ ಆಧರಿತ ಬರದ ಸನ್ನಿವೇಶ ಉದ್ಭವಿಸುತ್ತದೆ. ಅದರೆ, ಇದೇ ವೇಳೆ ಸುಧಾರಿಸಿದ ಮಳೆಯ ಮಾರುತಗಳಿಂದಾಗಿ ಹವಾಮಾನ ಮತ್ತು ಜಲಶಾಸ್ತ್ರೀಯ ಬರ ಕಾಣದೆ ಹೋಗಬಹುದು. ಈ ಸೂಕ್ಷ್ಮವನ್ನು ಬರ ಘೋಷಣೆಗೆ ಕಡ್ಡಾಯವಾಗಿರುವ ಮಾನದಂಡಗಳು ಒಳಗೊಳ್ಳಬೇಕಾಗಿದೆ.

ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್‌) ಅಂಶವೆಂದು ಪರಿಗಣಿಸಬೇಕು.

ಶುಷ್ಕ ಅಥವಾ ಒಣ ಹವೆಯ ವಿಚಾರದಲ್ಲಿಯೂ ಕೈಪಿಡಿಯಲ್ಲಿ ಕಠಿಣವಾದ ನಿಯಮಾವಳಿ ಇದೆ. ಬರ ಘೋಷಿಸಲು ಮೂರು ವಾರಗಳ ಒಣಹವೆಯನ್ನು ಸೂಚ್ಯಂಕವಾಗಿ ಪರಿಗಣಿಸಲಾಗಿದೆ. ವಿಪರ್ಯಾಸವೆಂದರೆ, ಎರಡು ಮೂರು ವಾರಗಳ ಒಣಹವೆ ಕೂಡ ಬೆಳೆಯ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡಿ ಸರಿಪಡಿಸಲಾಗದ ಬೆಳೆಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಳೆ ಕುರಿತಾದ ಸೂಚ್ಯಂಕದಲ್ಲಿ ಒಣಹವೆಯ ಅವಧಿಯನ್ನು ಎರಡು ವಾರಗಳಿಗಿಂತ ಕಡಿಮೆ ಎಂದು ಪರಿಗಣಿಸಬೇಕು.

ಬರ ಘೋಷಣೆಯ ವಿಳಂಬಕ್ಕೆ ಕಾರಣವಾಗುವ ಕೈಪಿಡಿಯಲ್ಲಿರುವ ಮತ್ತೊಂದು ಪ್ರಮುಖ ಮಾನದಂಡವೆಂದರೆ ಅದು ರಾಜ್ಯ ಸರ್ಕಾರವು ‘ಇನ್ನು ಯಾವುದೇ ಬಿತ್ತನೆ ಚಟುವಟಿಕೆ’ ನಡೆಯುವುದಿಲ್ಲ ಎಂದು ಬೆಳೆ ಹಂಗಾಮಿನ ವೇಳೆ ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿ ಪ್ರಮಾಣಪತ್ರ ಸಲ್ಲಿಸಬೇಕಿರುವುದು. ಇದು ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ. ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಯು ತಕ್ಷಣದ ಪರಿಹಾರ ನೀಡುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಬೇಕು ಎನ್ನುತ್ತದೆ. ಆದರೆ, ಮೇಲೆ ಹೇಳಿದ ಕೇಂದ್ರದ ನಿಯಮಾವಳಿಯಿಂದಾಗಿ ರಾಜ್ಯ ಸರ್ಕಾರವು ಬರ ಘೋಷಣೆ ಮಾಡಿ ತಕ್ಷಣ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು