News Karnataka Kannada
Saturday, April 20 2024
Cricket
ಬೆಂಗಳೂರು ನಗರ

ಬೆಂಗಳೂರು ಗ್ರಾಮಾಂತರ: ವಿಪತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿ ಎಂದ ಎಡಿಸಿ

Be prepared to deal with disaster situation, says ADC
Photo Credit : By Author

ಬೆಂಗಳೂರು ಗ್ರಾಮಾಂತರ: ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ ಸಾವು ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಯ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಪರಿಸ್ಥಿತಿ ನಿಭಾಯಿಸಲು ಸದಾ ಸನ್ನದ್ಧರಾಗಿ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್ ತಿಳಿಸಿದರು

ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಯೋಗದೊಂದಿಗೆ ಹೊಸಕೋಟೆ  ತಾಲ್ಲೂಕಿನ ದೇವನಗೊಂದಿ ಗ್ರಾಮದ ಬಳಿಯಿರುವ ಬಿಪಿಸಿಎಲ್‌ನ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣಾ ಘಟಕದಲ್ಲಿ ನಡೆದ ವಿಪತ್ತು ನಿರ್ವಹಣೆ ಬಗ್ಗೆ ಅಣುಕು ಪ್ರದರ್ಶನದ ನಂತರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.

ವಿಪತ್ತು ಸಂಭವಿಸಿದ ತುರ್ತು ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಮೊದಲ ಆದ್ಯ ಕರ್ತವ್ಯವಾಗಿದ್ದು, ಕಾರ್ಖಾನೆಗಳಲ್ಲಿ ಮಾತ್ರವಲ್ಲದೆ, ಪ್ರತಿ ಮನೆಗಳಲ್ಲೂ ಸಹ ಅಗ್ನಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದರಲ್ಲದೆ, ಸಹಾಯವಾಣ ಸಂಖ್ಯೆ 112 ಕ್ಕೆ ಕರೆ ಮಾಡಿ, ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್ ಸೇವೆ ಬಳಕೆ ಮಾಡಿಕೊಳ್ಳಬೇಕು ಎಂದರು.

ಅಣಕು ಪ್ರದರ್ಶನದಲ್ಲಿ ರಾಸಾಯನಿಕ ಸೋರಿಕೆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಕೈಗೊಳ್ಳಬೇಕಾದ ಮುಂಜಾಗ್ರತಾ ಸಿದ್ಧತೆಗಳ ಬಗ್ಗೆ ಕಾರ್ಯಾಚರಣೆಯಲ್ಲಿ ಬೆಳಕು  ಚೆಲ್ಲಲಾಯಿತಲ್ಲದೆ, ದುರಂತದಿಂದ ಮನುಷ್ಯನಿಗೆ ಸಂಭವಿಸುವ ಸಾವು-ನೋವು ಮತ್ತು ನಷ್ಟಗಳನ್ನು ಕನಿಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸಬೇಕು ಎಂದರು.

ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 8ಆಂಬ್ಯುಲೆನ್ಸ್‌ಗಳು, 2 ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸುಮಾರು 300 ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಅಣಕು ಪ್ರದರ್ಶನ ಫಲಕಾರಿಯಾಯಿತಲ್ಲದೆ, ಅಣುಕು ಪ್ರದರ್ಶನವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು ಅಣುಕು ಪ್ರದರ್ಶನವನ್ನು ವೀಕ್ಷಿಸಿ, ಸಲಹೆ ಸೂಚನೆಗಳನ್ನು ನೀಡಿದರು.

ಅಣುಕು ಪ್ರದರ್ಶನದ ಚಿತ್ರಣ – ದೇವನಗೊಂದಿ ಪೆಟ್ರೋಲಿಯಂ ಮತ್ತು ಎಲ್.ಪಿ.ಜಿ ಸಂಗ್ರಹಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸದಾಗ ಕಾರ್ಖಾನೆಯ ಸಿಬ್ಬಂದಿಗಳು ಪರಿಸ್ಥಿತಿ ನಿಯಂತ್ರಿಸಲಾಗದೆ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಮೊರೆ ಹೋದಾಗ ಅಪರ ಜಿಲ್ಲಾಧಿಕಾರಿ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ತುರ್ತು ಪರಿಸ್ಥಿತಿ ಘೋಷಿಸಿದರು.

ಹತ್ತಿರದ ಶಾಲೆಯೊಂದರಲ್ಲಿ ತೆರೆಯಲಾಗಿದ್ದ ಕಂಟ್ರೋಲ್ ರೂಂ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರನ್ನು ಕಾರ್ಯ ಪ್ರವೃತ್ತರನ್ನಾಗಿಸಿ ಅವಘಡ  ನಡೆದ ಸ್ಥಳಕ್ಕೆ ಧಾವಿಸಿ, ಸುಟ್ಟ ಗಾಯಾಳುಗಳನ್ನು ರಕ್ಷಿಸಿ, ಆಂಬ್ಯುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನರಸಿಂಹ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪ ನಿರ್ದೇಶಕ ತಿಮ್ಮರಾಜು, ಡಿವೈಎಸ್ಪಿ  ಉಮಾಶಂಕರ್, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞೆ ಡಾ. ವಿನುತಾ, ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಎನ್‌ಡಿಆರ್‌ಎಫ್, ಅಗ್ನಿ ಶಾಮಕ, ಗೃಹ ರಕ್ಷಕ ದಳ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು