ಬೆಂಗಳೂರು: ಬೆಂಗಳೂರಿನಲ್ಲಿ ರೈಡ್ ಆ್ಯಪ್ ಚಾಲಕನ ವಿರುದ್ಧ ರೂಪದರ್ಶಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ತನಿಖೆ ನಡೆಸಿದಾಗ ಸಂತ್ರಸ್ತೆ ಸುಳ್ಳು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಕರ್ನಾಟಕ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಡಬ್ಬಿಂಗ್ ಆರ್ಟಿಸ್ಟ್ ಆಗಿರುವ 21 ವರ್ಷದ ರೂಪದರ್ಶಿ, ರ್ಯಾಪಿಡೋ ಸರ್ವೀಸ್ ಬೈಕ್ ಸವಾರ ಮಂಜುನಾಥ್ ತಿಪ್ಪೇಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು.
ಭಾನುವಾರ ರಾತ್ರಿ 10.30ರ ಸುಮಾರಿಗೆ ಜಕ್ಕೂರಿನಿಂದ ಬೆಂಗಳೂರಿನ ಬಾಬುಸಾಬ್ ಪಾಳ್ಯಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ತಲುಪಲು ರ್ಯಾಪಿಡೋದಲ್ಲಿ ಕೆಎ 51 ಎಚ್ 5965 ಸಂಖ್ಯೆಯ ರಿಜಿಸ್ಟರ್ ನಂಬರ್ ಹೊಂದಿರುವ ಬೈಕನ್ನು ಬುಕ್ ಮಾಡಿದ್ದಾಗಿ ರೂಪದರ್ಶಿ ಹೇಳಿಕೊಂಡಿದ್ದಾರೆ. 25 ವರ್ಷದ ತಿಪ್ಪೇಸ್ವಾಮಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಅವಳು ಸುಳ್ಳು ದೂರು ನೀಡಿದ್ದಾಳೆ ಮತ್ತು ಅವಳು ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಳು, ಆದರೆ, ಸ್ವಲ್ಪ ಸಮಯದ ನಂತರ ಅವಳು ಅದನ್ನು ರದ್ದುಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸವಾರಿಯನ್ನು ರದ್ದುಗೊಳಿಸಿದ್ದರಿಂದ, ಬೈಕ್ ಟ್ಯಾಕ್ಸಿ ಸ್ಥಳಕ್ಕೆ ಬರಲಿಲ್ಲ. ತನಿಖೆಯ ನಂತರ, ಬೈಕ್ ಟ್ಯಾಕ್ಸಿ ಚಾಲಕನನ್ನು ಬಂಧಿಸದಿರಲು ಪೊಲೀಸರು ನಿರ್ಧರಿಸಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾತನಾಡಿ, ಮಹಿಳೆ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿ ಅದನ್ನು ರದ್ದುಗೊಳಿಸಿದ್ದಾರೆ. ಸ್ಥಳದಲ್ಲಿ ಆರೋಪಿಗಳ ಉಪಸ್ಥಿತಿಯನ್ನು ತೋರಿಸಲು ಯಾವುದೇ ಪುರಾವೆಗಳಿಲ್ಲ. ಇದು ಸುಳ್ಳು ಪ್ರಕರಣ ಎಂದು ದೃಢಪಟ್ಟಿದೆ. ಆದರೆ, ಅವರು ಏಕೆ ಸುಳ್ಳು ದೂರು ದಾಖಲಿಸಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ, ಪೊಲೀಸರು ಬೈಕ್ ಟ್ಯಾಕ್ಸಿ ಸವಾರ ಮತ್ತು ರ್ಯಾಪಿಡೋ ಕಂಪನಿಯ ವಿರುದ್ಧ ಲೈಂಗಿಕ ಕಿರುಕುಳಕ್ಕಾಗಿ ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.