News Karnataka Kannada
Friday, May 17 2024
ಬೆಂಗಳೂರು ನಗರ

ಬೆಂಗಳೂರು: 20 ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿರುವ ಬಿಟಿಎಸ್ ರಜತೋತ್ಸವ ಶೃಂಗ ಸಮಾವೇಶ

Photo Credit : News Kannada

ಬೆಂಗಳೂರು: ಇಡೀ ಜಗತ್ತಿನ ತಂತ್ರಜ್ಞಾನದ ಬೆಳವಣಿಗೆಯನ್ನು ವರ್ಷ ವರ್ಷವೂ ಅನಾವರಣಗೊಳಿಸುತ್ತಾ ಬಂದಿರುವ ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ ಸಮಾವೇಶಕ್ಕೆ (ಬಿಟಿಎಸ್- 22) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ(ನ.)16 ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಏಷ್ಯಾ ಖಂಡದಲ್ಲೇ ಮಹತ್ವದ ಕಾರ್ಯಕ್ರಮವೆಂದು ಹೆಸರಾಗಿರುವ ಈ ತಂತ್ರಜ್ಞಾನ ಸಮಾವೇಶಕ್ಕಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಆಗಿರುವ ಸಿದ್ಧತೆಗಳನ್ನು ಮುನ್ನಾ ದಿನವಾದ ಮಂಗಳವಾರ ಐಟಿ/ಬಿಟಿ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಅವರು ಪರಿಶೀಲಿಸಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 ದಿನಗಳ ಕಾಲ ಭೌತಿಕ ಸ್ವರೂಪದಲ್ಲಿ ನಡೆಯುವ ಈ ಸಮಾವೇಶವು ಕನಿಷ್ಠ 9 ಒಡಂಬಡಿಕೆಗಳಿಗೆ (ಎಂಒಯು) ಹಾಗೂ 20ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.

ಸಮಾವೇಶದಲ್ಲಿ 575 ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಜೊತೆಗೆ ದೇಶದ 16 ವಿವಿಧ ರಾಜ್ಯಗಳ ಸ್ಟಾರ್ಟ್ ಅಪ್ ಗಳು ಪಾಲ್ಗೊಳ್ಳುತ್ತಿರುವುದು ಈ ಬಾರಿಯ ವಿಶೇಷ ಎಂದು ಅಶ್ವತ್ಥನಾರಾಯಣ ವಿವರಿಸಿದರು.

350ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪರಿಣತರು ತಂತ್ರಜ್ಞಾನದ ಮಜಲುಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಅಲ್ಲದೆ 5,000 ಕ್ಕಿಂತ ಹೆಚ್ಚು ಉದ್ಯಮಿಗಳು ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಸಮಾವೇಶದಲ್ಲಿ ಸುಮಾರು 75 ಗೋಷ್ಠಿಗಳು ನಡೆಯಲಿವೆ. ಐ ಓ ಟಿ/ ಡೀಪ್ ಟೆಕ್, ಬಯೋಟೆಕ್, ಸ್ಟಾರ್ಟ್ ಅಪ್, ಜಿಐಎ-1 ಹಾಗೂ ಜಿಐಎ-2, ಈ ಐದು ವಿಭಾಗಗಳಡಿ ಗೋಷ್ಠಿಗಳು ವಿಂಗಡಣೆಗೊಂಡಿವೆ.

ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೆಮಿಕಂಡಕ್ಟರ್, ಮಷೀನ್ ಲರ್ನಿಂಗ್, 5ಜಿ, ರೋಬೋಟಿಕ್ಸ್, ಫಿನ್ ಟೆಕ್, ಜೀನ್ ಎಡಿಟಿಂಗ್, ಮೆಡಿ ಟೆಕ್, ಸ್ಪೇಸ್ ಟೆಕ್, ಜೈವಿಕ ಇಂಧನ ಸುಸ್ಥಿರತೆ, ಇ- ಸಂಚಾರ ಹೀಗೆ ವಿವಿಧ ಪ್ರವರ್ಧಮಾನಕ್ಕೆ ಬರುತ್ತಿರುವ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಸಂವಾದಗಳು ನಡೆಯಲಿವೆ.

ಜಿಐಎ ವಿಭಾಗದಲ್ಲಿ ಜಪಾನ್, ಫಿನ್ಲೆಂಡ್, ನೆದರ್ಲ್ಯಾಂಡ್, ಡೆನ್ಮಾರ್ಕ್, ಸ್ವೀಡನ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರೇಲಿಯಾ, ಅಮೇರಿಕಾ, ಲಿತುವೇನಿಯ, ಕೆನಡಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ತಾಂತ್ರಿಕ ಪ್ರಗತಿಯ ಬಗ್ಗೆ ಗಮನ ಸೆಳೆಯಲಿವೆ. ಅಲ್ಲದೇ, ಭಾರತದ ಉದ್ಯಮಗಳೊಂದಿಗೆ ತಾವು ಹೊಂದ ಬಯಸುವ ಸಹಭಾಗಿತ್ವದ ಬಗ್ಗೆ ಮನವರಿಕೆ ಮಾಡಿಕೊಡಲಿವೆ ಎಂದು ನಾರಾಯಣ ವಿವರಿಸಿದರು.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ ಅಜಯ್ ಕೆ. ಸೂದ್ ಅವರು ಮೊದಲ ದಿನ ಸಂವಾದಾಗೋಷ್ಠಿ ನಡೆಸಿಕೊಡುವರು. ನೊಬೆಲ್ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಹೆಸರಾಂತ ತಜ್ಞರು ಭಾಗವಹಿಸುವ ಈ ಸಮಾವೇಶವನ್ನು ಐಟಿ/ಬಿಟಿ ಇಲಾಖೆಯು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ ಟಿ ಪಿ ಐ) ಸಹಯೋಗದಲ್ಲಿ ಆಯೋಜಿಸಿದೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ತಿಳಿಸಿದರು.

ಸಮಾವೇಶವು ಭೌತಿಕ ಸ್ವರೂಪದಲ್ಲಿ ನಡೆಯುತ್ತಿದ್ದರೂ ಎಲ್ಲಾ ಗೋಷ್ಠಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ www bengalurutech.com ಜಾಲತಾಣಕ್ಕೆ ಭೇಟಿ ಕೊಡಬಹುದು.

ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಸಮಾವೇಶವನ್ನು ನಿರ್ವಹಿಸುವ ಎಂಎಂ ಆಕ್ಟಿವ್ ನ ಜಗದೀಶ್ ಪಟಂಕರ್ ಮತ್ತಿತರರು ಇದ್ದರು.

ಸಾರ್ವಜನಿಕರಿಗೆ ಮುಕ್ತ ಅವಕಾಶ

ಮೂರು ದಿನ ನಡೆಯುವ ಬೆಂಗಳೂರು ಟೆಕ್ ಸಮಿಟ್ ಗೆ ನಿತ್ಯ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುತ್ತದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಖುದ್ದು ನೋಡಲು ಅನುಕೂಲ ಕಲ್ಪಿಸುವುದು ಇದರ ಉದ್ದೇಶ ಎಂದು ಸಚಿವರು ತಿಳಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು