ಬೆಂಗಳೂರು : ಕಳೆದ ಮೂರು ದಿನಗಳಿಂದ ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಂಡುಬರುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಂಡನ್ನಿಂದ ಆಗಮಿಸಿದ ಎರಡು ಪ್ರತ್ಯೇಕ ಹಾಗೂ ಪ್ಯಾರೀಸ್ನಿಂದ ಆಗಮಿಸಿ ಒಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಲಂಡನ್ನಿಂದ ಬಂದ 56 ವರ್ಷದ, 21 ವರ್ಷದ, 43 ವರ್ಷದ ಮೂವರು ಪುರುಷರಲ್ಲಿ , 39 ವರ್ಷದ ಮಹಿಳೆಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಅಲ್ಲದೆ 29 ಮತ್ತು 26 ವರ್ಷದ ಪುರುಷ ಪ್ರಯಾಣಿಕರಿಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ಪ್ಯಾರೀಸ್ನಿಂದ ಆಗಮಿಸಿದ 24 ವರ್ಷದ ಪುರುಷ, 65 ವರ್ಷದ ಮಹಿಳೆ ಹಾಗೂ 12 ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿರುವುದು ಜನರಲ್ಲಿನ ಆತಂಕವನ್ನು ಇಮ್ಮಡಿಗೊಳಿಸಿದೆ. ಕೋವಿಡ್ ಸೋಂಕಿತ ಪ್ರಯಾಣಿಕರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಕೃತ ಮೂಲಗಳು ತಿಳಿಸಿವೆ.