News Karnataka Kannada
Wednesday, May 08 2024
ಬೆಂಗಳೂರು ನಗರ

ರಾಜ್ಯಪಾಲರ ಭಾಷಣ ಕೋವಿಡ್ ನಿಂದ, ಕೋವಿಡ್ ಗಾಗಿ, ಕೋವಿಡ್ ಗೋಸ್ಕರವೇ ಮಾಡಿರುವಾಗಿದೆ; ಹೆಚ್ಡಿಕೆ

Photo Credit :

ಬೆಂಗಳೂರು : ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣವು ಕೋವಿಡ್ ನಿಂದ, ಕೋವಿಡ್ ಗಾಗಿ, ಕೋವಿಡ್ ಗೋಸ್ಕರವೇ ಮಾಡಿರುವ ಭಾಷಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ರಾಜ್ಯದ ಅಭಿವೃದ್ಧಿ ಮುನ್ನೋಟದಂತೆ ಇರಬೇಕಾಗಿದ್ದ ರಾಜ್ಯಪಾಲರ ಭಾಷಣವು ನೀರಸ ಮತ್ತು ನಿರಾಶಾದಾಯಕವಾಗಿತ್ತು ಎಂದರು.

ಸರ್ಕಾರದ ಹಿಂದಿನ ಹಾಗೂ ಮುಂದೆ ಮಾಡಬಹುದಾದ ಅಭಿವೃದ್ಧಿಯ ಬಗ್ಗೆ ಭಾಷಣದಲ್ಲಿ ಏನೇನು ಹೇಳಿಲ್ಲ. ಸ್ಪಷ್ಟತೆ, ನಿರ್ಧಿಷ್ಟ ದಿಕ್ಸೂಚಿ ಇಲ್ಲದ ಭಾಷಣ ಇದು. ರಾಜ್ಯಪಾಲರ ಭಾಷಣದ ಮೂಲಕವೇ ಮುಂದಿನ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸರಕಾರವೇ ನೇರವಾಗಿ ಜನರಿಗೆ ಹೇಳಿದಂತಿದೆ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಅತ್ಯಂತ ಅಮೂಲ್ಯವಾದ ರಾಜ್ಯಪಾಲರ ಭಾಷಣದಲ್ಲಿ ಹಳೆಯ ಕೋವಿಡ್ ಅಂಶಗಳನ್ನಷ್ಟೆ ಓದಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಸರಕಾರದ ಹಗಣಗಳ ಪ್ರಸ್ತಾಪ:

ಈ ಬಾರಿ ಸದನದಲ್ಲಿ ಅಭಿವೃದ್ಧಿ ವಿಷಯಗಳು ಸೇರಿದಂತೆ ಕೆಲ ಪ್ರಮುಖ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದೇನೆ. ಮುಖ್ಯವಾಗಿ ತಮ್ಮದು ಕ್ಲೀನ್ ಸರಕಾರ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಸರಕಾರದಲ್ಲಿ ನಡೆದಿರುವ ಕೆಲ ಭ್ರಷ್ಟ ಹಗರಣಗಳ ಬಗ್ಗೆ ಮಾತನಾಡುವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಈಗಿರುವ ಬಿಜೆಪಿ ಸರಕಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ ಸರಿ. ಆದರೆ, ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದಲ್ಲಿ ಏನೆಲ್ಲಾ ನಡೆಯಿತು ಎನ್ನುವುದು ಕೂಡ ಜನರಿಗೆ ಗೊತ್ತಾಗಬೇಕಲ್ಲವೇ? ಎಂದರು ಮಾಜಿ ಮುಖ್ಯಮಂತ್ರಿಗಳು.

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ:

ಮಹದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವೂ ಕರ್ನಾಟಕದಲ್ಲಿ ಒಂದು ಮಾತು, ಗೋವಾದಲ್ಲಿ ಇನ್ನೊಂದು ಮಾತು ಹೇಳುತ್ತಿದೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯಕ್ಕೆ ಮಹದಾಯಿ ನೀರು ಕೊಡುವುದಿಲ್ಲ ಎಂದು ಹೇಳುತ್ತಿದೆ. ರಾಹುಲ್ ಗಾಂಧಿ ಅವರೇ ಬಿಡುಗಡೆ ಮಾಡಿದ ಆ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೆ ಬರೆಯಲಾಗಿದೆ. ಹಾಗಾದರೆ, ಗೋವಾದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಹೋಗಿದ್ದ ಆ ಪಕ್ಷದ ರಾಜ್ಯ ನಾಯಕರು ಈ ಬಗ್ಗೆ ಏನು ಹೇಳುತ್ತಾರೆ? ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲ ಎಂದು ಹೇಳುತ್ತಿದೆ. ಆದರೆ, ಆ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಹದಾಯಿ ನೀರಿಗಾಗಿ ರಾಜ್ಯದಲ್ಲಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇಬ್ಬಗೆಯ ನೀತಿ ಎಂದರೆ ಇದೇ ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ಹಿಜಾಬ್ ನಿಂದ ರಾಜಕೀಯ ಲಾಭ:

ಮಕ್ಕಳ ಮನಸಿನಲ್ಲೂ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಹಿಂದಿರುವ ಸಂಘಟನೆಗಳ ಬಗ್ಗೆ ನಾನು ಹೇಳುವುದು ಇಷ್ಟೇ. ರಾಜ್ಯದ ಸಾಮರಸ್ಯವನ್ನು ಹಾಳು ಮಾಡಬೇಡಿ. ಇದು ಶಾಂತಿಯುತ ರಾಜ್ಯ. ಹಾಗೆಯೇ ಮಕ್ಕಳ ಪೋಷಕರಿಗೂ ಹೇಳುತ್ತೇನೆ, ಯಾವುದೇ ಕಾರಣಕ್ಕೂ ಮಕ್ಕಳು ಸ್ವಾರ್ಥ ಸಂಘಟನೆಗಳಿಂದ ಪ್ರೇರೇಪಿತರಾಗದಂತೆ ತಡೆಯಿರಿ. ಇಂಥ ವಾತಾವರಣ ನಿರ್ಮಾಣ ಆಗಲು ಬಿಟ್ಟಿದ್ದೇ ಸರಕಾರದ ವೈಫಲ್ಯ. ಉಡುಪಿಯಲ್ಲಿ ಆದ ಘಟನೆಯನ್ನು ಅಲ್ಲೇ ತಡೆದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡುತ್ತಿವೆ. ಯಾವುದೇ ಕಾರಣಕ್ಕೂ ಹಾಗೆ ಮಾಡುವುದು ಬೇಡ. ಪಂಚರಾಜ್ಯಗಳ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡೋಕೆ ಈ ಪಕ್ಷಗಳಿಗೆ ವಿಷಯ ಇಲ್ಲ. ಹೀಗಾಗಿ ಭಾವನಾತ್ಮಕ ವಿಷಯಗಳಿಂದ ಮತ ಪಡೆಯಲು ಈ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಮುಂದೆ ಇದು ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೋ ನೋಡೋಣ ಎಂದು ಮಾಜಿ ಸಿಎಂ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಷೆಂಪೂರ್, ವಿಧಾನ ಪರಿಷತ್ ನಲ್ಲಿ ಪಕ್ಷದ ಮುಖ್ಯ ಸಚೇತಕ ಗೋವಿಂದ ರಾಜು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು