ಬೆಂಗಳೂರು:ಹೈರಿಸ್ಕ್ ರಾಷ್ಟ್ರ ಬ್ರಿಟನ್ನಿಂದ ನಗರಕ್ಕೆ ಆಗಮಿಸಿದ ಮೂವರು ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ಆಗಿದೆ.22 ಮತ್ತು 18 ವರ್ಷದ ಯುವಕರು ಹಾಗೂ ಒಂಬತ್ತು ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ. ಮೂವರು ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತರೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಇತರ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ನಲ್ಲಿರಿಸಲು ಸೂಚಿಸಲಾಗಿದೆ.
ಇಂದು ಮುಂಜಾನೆ ಬ್ರಿಟನ್ನಿಂದ ಆಗಮಿಸಿದ ಪ್ರಯಾಣಿಕರನ್ನು ಕೆಐಎಎಲ್ ನಿಲ್ದಾಣದಲ್ಲಿ ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಮೂವರಿಗೆ ಕೊರೊನಾ ಕಾಣಿಸಿಕೊಂಡಿರುವುದು ದೃಢಪಟ್ಟಿದೆ.
ಸೋಂಕು ಕಾಣಿಸಿಕೊಂಡಿರುವ ಮೂವರ ಪರೀಕ್ಷಾ ವರದಿಯನ್ನು ಜಿನೋಮ್ ಸಿಕ್ವೇನ್ಸಿ ಪರೀಕ್ಷೆಗೆ ರವಾನಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯಾಕಾರಿಗಳು ತಿಳಿಸಿದ್ದಾರೆ.
ಇದುವರೆಗೂ 20 ಕ್ಕೂ ಹೆಚ್ಚು ಮಾದರಿಗಳನ್ನು ಜಿನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ವರದಿ ಕೈ ಸೇರುವ ಸಾಧ್ಯತೆಗಳಿವೆ.
ಒಂದು ವೇಳೆ 20 ಸೋಂಕಿತರಲ್ಲಿ ಯಾರಿಗಾದರೂ ಓಮಿಕ್ರಾನ್ ಕಾಣಿಸಿಕೊಂಡರೆ ನಗರದಲ್ಲೂ ಓಮಿಕ್ರಾನ್ ಹಾವಳಿ ಹೆಚ್ಚಾಗುವ ಸಾಧ್ಯತೆಗಳಿವೆ.