ಬೆಂಗಳೂರು: ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪೈಸೆಸ್ (ನೈಸ್) ಆಡಳಿತ ಮಂಡಳಿಯು ಜ.16 ರಿಂದ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಿದೆ.
ಇತ್ತೀಚೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತ ಹೆಚ್ಚಾಗುತ್ತಿದ್ದವು. ಜತೆಗೆ ಬೈಕ್ ಸವಾರರ ಸೋಗಿನಲ್ಲಿ ಒಳ ಪ್ರವೇಶ ಮಾಡಿ ಕಿಡಿಗೇಡಿಗಳು ಸರಕು ಸಾಗಾಣೆ ವಾಹನ, ಕಾರುಗಳನ್ನು ಅಡ್ಡಗಟ್ಟಿ ರಾಬರಿ, ಸುಲಿಗೆ ಮಾಡುತ್ತಿದ್ದರು.
ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ ಎಂದು ನೈಸ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ಅವರ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರ ಸುರಕ್ಷತೆ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ.
ಯುವಕ-ಯುವತಿಯರು ರಸ್ತೆ ನಡುವೆ ಬೈಕ್ ನಿಲ್ಲಿಸಿ ಕಾಲಹರಣ ಮಾಡುವುದು, ವೀಲ್ಹಿಂಗ್ ಮಾಡುತ್ತಿದ್ದರು. ಇದರಿಂದ ಸವಾರರ ಸುಕ್ಷತೆ ಇರಲಿಲ್ಲ. ಈ ಎಲ್ಲ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.