News Karnataka Kannada
Friday, May 17 2024
ಬೆಂಗಳೂರು ನಗರ

ಪಠ್ಯ ಪರಿಷ್ಕರಣೆ ಮೂಲಕ ಪೂರ್ಣಸತ್ಯ ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ: ನಾಗೇಶ್‌

Photo Credit :

ಬೆಂಗಳೂರು, (ಮೇ.24): ದೇಶದ ಇತಿಹಾಸ, ಸಂಸ್ಕೃತಿ, ಹೋರಾಟ, ದೇಶಭಕ್ತಿ ಮತ್ತಿತರ ವಿಚಾರಗಳ ಬಗ್ಗೆ ಇದುವರೆಗೆ ಶಾಲಾ ಪಠ್ಯಪುಸ್ತಕದಲ್ಲಿ ಅರ್ಧ ಸತ್ಯ ಇತ್ತು. ನಮ್ಮ ಸರ್ಕಾರ ಪಠ್ಯ ಪರಿಷ್ಕರಣೆ ಮೂಲಕ ಪೂರ್ಣಸತ್ಯವನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಪಠ್ಯ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಪಠ್ಯವನ್ನು 10ನೇ ತರಗತಿ ಪಠ್ಯದಿಂದ ಕೈಬಿಟ್ಟಿಲ್ಲ. ಭಗತ್‌ಸಿಂಗ್‌ ಜೊತೆಗೆ ಕ್ರಾಂತಿಕಾರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್‌ ಆಜಾದ್‌, ರಾಜ್‌ಗುರು ಸುಖದೇವ್‌ ಅವರನ್ನು ಸೇರ್ಪಡೆ ಮಾಡಲಾಗಿದೆ.

ಸಾಮಾಜಿಕ ಹರಿಕಾರ ಬಸವಣ್ಣ ಅವರ ಪಠ್ಯವನ್ನೂ ಮುಂದುವರೆಸಲಾಗಿದೆ. ನಾರಾಯಣಗುರು ಅವರ ಪಠ್ಯವನ್ನು ಇತಿಹಾಸ ಪಠ್ಯದ ಹೊರೆ ಇಳಿಸಲು ಕನ್ನಡ ಪಠ್ಯಕ್ಕೆ ಸೇರಿಸಲಾಗಿದೆ. ಆರೆಸ್ಸೆಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯಕ್ಕೆ ಸೇರಿಸಿರುವುದು ನಿಜ. ಮಾದರಿ ವ್ಯಕ್ತಿಗಳ ಬಗ್ಗೆ ಅವರ ಭಾಷಣವನ್ನು ಬಿಟ್ಟು ಲೇಖಕರ ಬಗ್ಗೆಯಾಗಲಿ, ಆರೆಸ್ಸೆಸ್‌, ಅದರ ಸಿದ್ಧಾಂತದ ಬಗ್ಗೆಯಾಗಲಿ ಪಾಠದಲ್ಲಿ ಏನೂ ಇಲ್ಲ. ಇದರ ಜೊತೆಗೆ ಚಕ್ರವರ್ತಿ ಸೂಲಿಬೆಲೆ ಅವರು ಕ್ರಾಂತಿಕಾರಿಗಳ ಬಗ್ಗೆ ಬರೆದಿರುವ ‘ತಾಯಿ ಭಾರತೀಯ ಅಮರಪುತ್ರರು’ ಎಂಬ ಬರಹವನ್ನೂ ಪಠ್ಯದಲ್ಲಿ ಸೇರಿಸಿರುವುದಾಗಿ ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಅವಹೇಳನ ಮಾಡಿಲ್ಲ. ಈ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಇದ್ದಂತಹ ಪಠ್ಯವನ್ನೇ ಮುಂದುವರಿಸಲಾಗಿದೆ. ಆದರೆ, ಟಿಪ್ಪು ಸುಲ್ತಾನ್‌ ಕುರಿತು ವೈಭವೋಪೇತ ಅಂಶಗಳನ್ನು ಕೈಬಿಡಲಾಗಿದೆ. ಟಿಪ್ಪು ಹೋರಾಟಗಾರ ಎಂಬುದರ ಜೊತೆಗೆ ಎಷ್ಟುಮತಾಂಧನಾಗಿದ್ದ ಎಂಬುದನ್ನೂ ತಿಳಿಸಲಾಗಿದೆ. ಅದೇ ರೀತಿ ರಾವಣ ಸಂಸ್ಕೃತಿ ಬಿಂಬಿಸುವ ಪೆರಿಯಾರ್‌ ಅವರ ಪಾಠವನ್ನು ತೆಗೆದು ಹಾಕಲಾಗಿದೆ ಎಂದು ಸಮರ್ಥಿಸಿಕೊಂಡರು.

ಹಿಂದಿನ ಕಾಂಗ್ರೆಸ್‌ ಸರ್ಕಾರ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಮೂಲಕ ಪಠ್ಯದಲ್ಲಿ ಯಾವೆಲ್ಲಾ ಸುಳ್ಳು ಮತ್ತು ತಪ್ಪು ಮಾಹಿತಿ ತುಂಬಿತ್ತೋ ಅದನ್ನು ತೆಗೆದುಹಾಕಿ ನಿಜವಾದ ಹೀರೋಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಇತಿಹಾಸವನ್ನು ಅರ್ಧ ಅಥವಾ ಯಾವುದೇ ವ್ಯಕ್ತಿ, ವಿಷಯದ ಒಂದು ಮುಖ ತೋರಿಸದೆ ಪೂರ್ಣ ಮುಖ ಪರಿಚಯಿಸುವ ಕೆಲಸ ಮಾಡಲಾಗಿದೆ. ಹಿಂದೂ ಧರ್ಮದ ಬಗ್ಗೆ ಬರೀ ಋುಣಾತ್ಮಕ ಅಂಶಗಳನ್ನೇ ಬೋಧಿಸುವ ಬದಲು ಅದರಲ್ಲಿರುವ ಧನಾತ್ಮಕ, ಆದರ್ಶಪ್ರಾಯ ಅಂಶಗಳನ್ನು ಸೇರಿಸುವ ಕೆಲಸ ಮಾಡಲಾಗಿದೆ. ಬೇರೆ ಧರ್ಮಗಳನ್ನು ಹೇರುವ ಅಂಶಗಳನ್ನು ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಹೇಳಿದರು.

ರಾಜಕೀಯಕ್ಕಾಗಿ ಪಠ್ಯಪುಸ್ತಕ ಹೊರಬರುವ ಮೊದಲೇ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ. ಪಠ್ಯಗಳು ವಿಷಯಾಧಾರಿತವಾಗಿರಬೇಕು. ಎಂದಿಗೂ ವ್ಯಕ್ತಿಗತ ಅಥವಾ ಜಾತಿ ಆಧಾರದಲ್ಲಿ ನೋಡಬಾರದು. ನಾವು ದಲಿತರು, ಅಲ್ಪಸಂಖ್ಯಾತ ಸಾಹಿತಿಗಳ ಪಾಠ ತೆಗೆದು ಕೇವಲ ಬ್ರಾಹ್ಮಣರ ಪಾಠಗಳನ್ನು ಸೇರ್ಪಡೆ ಮಾಡಿಲ್ಲ. ಇದು ಸುಳ್ಳು. ಹಾಗಿದ್ದಿದ್ದರೆ ದೇವನೂರು ಮಹಾದೇವ ಅವರ ಪಾಠಗಳನ್ನು ಏಕೆ ಉಳಿಸಿಕೊಂಡಿದ್ದೇವೆ. ಚಕ್ರವರ್ತಿ ಸೂಲಿಬೆಲೆ ಅವರ ಬರಹ ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸುವವರು, ಕಾಂಗ್ರೆಸ್‌ನವರಾದ ನಟಿ ಜಯಮಾಲಾ, ಜಿ. ರಾಮಕೃಷ್ಣ ಅವರ ಪಾಠಗಳನ್ನು ಯಾವ ಮಾನದಂಡದ ಆಧಾರದಲ್ಲಿ ಸೇರ್ಪಡೆ ಮಾಡಲಾಗಿದೆ ಎನ್ನುತ್ತಾರೆ ಎಂದು ಪ್ರಶ್ನಿಸಿದರು.

2ನೇ ಪಿಯು ಪಠ್ಯ ಪರಿಷ್ಕರಣೆ ಕೂಡ ರೋಹಿತ್‌ ಚಕ್ರತೀರ್ಥಗೆ: ದ್ವಿತೀಯ ಪಿಯುಸಿಯ ಇತಿಹಾಸ ಪಠ್ಯವೊಂದರಲ್ಲಿ ಕೆಲ ಸಮುದಾಯಗಳ ಭಾವನೆಗೆ ಧಕ್ಕೆ ತರುವ ವಿಷಯಗಳಿದ್ದು, ಅವುಗಳ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ. ಈ ಪಠ್ಯದ ಪರಿಷ್ಕರಣೆ ಹೊಣೆಯನ್ನೂ ರೋಹಿತ್‌ ಚಕ್ರತೀರ್ಥ ಅವರ ಸಮಿತಿಗೆ ವಹಿಸಲಾಗಿದೆ ಎಂದು ಇದೇ ವೇಳೆ ಸಚಿವ ನಾಗೇಶ್‌ ತಿಳಿಸಿದರು. ಇತಿಹಾಸ ಪಠ್ಯದಲ್ಲಿ ‘ಹೊಸ ಧರ್ಮಗಳ ಉದಯ’ ಪಠ್ಯದಲ್ಲಿ ಕೆಲ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂಬ ದೂರುಗಳಿವೆ. ಹಾಗಾಗಿ ಪರಿಷ್ಕರಿಸಲಾಗುತ್ತಿದೆ. ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗುವುದು. ಇತಿಹಾಸ ಪಠ್ಯದ ಒಂದು ಅಧ್ಯಾಯವನ್ನು ಬಿಟ್ಟು ಇನ್ಯಾವುದೇ ವಿಷಯ, ಅಧ್ಯಾಯ ಪರಿಷ್ಕರಣೆ ಮಾಡುವುದಿಲ್ಲ. ಹೊಸದಾಗಿ ಏನನ್ನೂ ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು