News Karnataka Kannada
Monday, May 20 2024
ಬೆಂಗಳೂರು ನಗರ

ಐದು ವರ್ಷಗಳಲ್ಲಿ ಕೊಟ್ಟಿಗೆ ಗೊಬ್ಬರ ಬೆಲೆ ಮೂರು ಪಟ್ಟು ಏರಿಕೆ

Photo Credit :

ಐದು ವರ್ಷಗಳಲ್ಲಿ ಕೊಟ್ಟಿಗೆ ಗೊಬ್ಬರ ಬೆಲೆ ಮೂರು ಪಟ್ಟು ಏರಿಕೆ

ಬೆಂಗಳೂರು: ಐದು ವರ್ಷಗಳಲ್ಲಿ ಮೂರು ಪಟ್ಟು ಏರಿಕೆಯಾಗುವ ಮೂಲಕ ದೊಡ್ಡಿ (ಕೊಟ್ಟಿಗೆ) ಗೊಬ್ಬರದ ದರವು ಮಧ್ಯ ಕರ್ನಾಟಕದ ಹೊಸ ಕೃಷಿ ಟ್ರೆಂಡ್‌ನ ದಿಕ್ಸೂಚಿಯಾಗಿ ಕಾಣುತ್ತಿದೆ. ಯುಗಾದಿ ಸಂದರ್ಭ ಕೊಟ್ಟಿಗೆ ಗೊಬ್ಬರ ತೆಗೆಸಿ ಹೊಲಕ್ಕೆ ಹಾಕುವುದು ಸಂಪ್ರದಾಯವಾಗಿದ್ದು, ಇತ್ತೀಚಿನ ವರ್ಷದಲ್ಲಿಹೊಂಡದಲ್ಲಿ ಇರುವಾಗಲೇ ಕೊಟ್ಟಿಗೆ ಗೊಬ್ಬರಕ್ಕೆ ಬೇಡಿಕೆ ಬರುತ್ತಿದೆ.ನ್ಯಾಮತಿ, ಹೊನ್ನಾಳಿ ಮತ್ತಿತರ ತಾಲೂಕುಗಳಲ್ಲಿಈ ಮೊದಲು ಹೆಚ್ಚುವರಿ ಗೊಬ್ಬರವನ್ನು ಶಿವಮೊಗ್ಗ ಹಾಗೂ ಚಿಕ್ಕಮಗಳೂರಿಗೆ ಸಾಗಿಸಿ ಮಾರಿ ಬರುವುದು ರೂಢಿ ಆಗಿತ್ತು. ಆದರೆ, ಇತ್ತೀಚೆಗೆ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ ತಾಲೂಕಿನಿಂದ ಮುಂಚಿತವಾಗಿಯೇ ಬೇಡಿಕೆ ಇರುತ್ತದೆ ಎಂದು ರಾಣೆಬೆನ್ನೂರು ನಂದಿಹಳ್ಳಿಯ ಗೊಬ್ಬರ ಸಾಗಾಟಗಾರ ಎನ್‌.ಕೆ. ಬಸನಗೌಡ ಹೇಳುತ್ತಾರೆ.
ಮಧ್ಯಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಹಾಗೂ ಭಾಗಶಃ ವಿಜಯ ನಗರ, ಹಾವೇರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಗಣಿ ಗೊಬ್ಬರದ ಬೇಡಿಕೆ ಹೆಚ್ಚಾಗುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಡಕೆ ತೋಟವು ಇದಕ್ಕೆ ಮುಖ್ಯ ಕಾರಣ ಎಂದು ದಾವಣಗೆರೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಹೇಳುತ್ತಾರೆ.’ಚಿತ್ರದುರ್ಗದಲ್ಲಿ ಪ್ರತಿ ಟನ್‌ಗೆ ಸುಮಾರು 5,500 ರೂ. ಬೇಡಿಕೆ ಇದ್ದು, ರೈತರಲ್ಲಿಬೇಡಿಕೆಗೆ ತಕ್ಕಷ್ಟು ಲಭ್ಯವಾಗದ ಕಾರಣ ಹಸು ಸಾಕಿ ಡೈರಿಗಳನ್ನು ಮಾಡಿಕೊಂಡವರಿಂದ ತರಲಾಗುತ್ತಿದೆ’ ಎಂದು ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹೇಳಿದರು. ಡೈರಿಯವರು ಸಿದ್ಧವಾದ ದೊಡ್ಡಿ ಗೊಬ್ಬರ ಕೊಡುವುದಿಲ್ಲ, ಬದಲಾಗಿ ಹಸಿ ಸಗಣಿಯನ್ನು 2 ಸಾವಿರ ರೂ. ಪ್ರತಿ ಟನ್‌ಗೆ ಕೊಟ್ಟು ತಂದು ಅದನ್ನು ಗೊಬ್ಬರವಾಗಿಸಿ ತೋಟಕ್ಕೆ ಹಾಕಿಸಬೇಕು. ಹೀಗಾಗಿ ಕಳೆದ ನಾಲ್ಕು ವರ್ಷದಿಂದ ಚಿತ್ರದುರ್ಗದಲ್ಲಿ ಸಗಣಿ ಗೊಬ್ಬರ ದರ ಟನ್‌ಗೆ 2 ರಿಂದ 3 ಸಾವಿರ ರೂ. ಏರಿಕೆ ಕಂಡಿದೆ.
ಪೂರೈಕೆ ಕೊರತೆ ಕಂಡರೂ ಕಳೆದ ನಾಲ್ಕು ವರ್ಷಗಳಲ್ಲಿ ರಾಸಾಯನಿಕ ಗೊಬ್ಬರದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ರಾಸಾಯನಿಕ ಗೊಬ್ಬರದ ದರ ಏರಿದರೆ ಸರಕಾರದ ವಿರುದ್ಧ ಧ್ವನಿ ಎತ್ತುವುದು ರೂಢಿ. ಸಗಣಿ ಗೊಬ್ಬರದ ವಿಚಾರದಲ್ಲಿ ದರ ಏರುತ್ತಿದೆ ಎಂಬುದು ಮಾತ್ರ ಗೊತ್ತಾಗುತ್ತಿದೆ. ಜಿಲ್ಲೆಯೊಂದರಲ್ಲಿ ಎಷ್ಟು ಪ್ರಮಾಣದಲ್ಲಿ ಬೇಡಿಕೆ ಇದೆ, ಎಷ್ಟು ಉತ್ಪಾದನೆ ಆಗುತ್ತದೆ ಎಂಬ ಬಗ್ಗೆ ನಿರ್ದಿಷ್ಟ ಅಂಕಿ ಸಂಖ್ಯೆಗಳು ಇಲ್ಲವಾಗಿದೆ.ಹಾಗೆ ನೋಡಿದರೆ ಕರಾವಳಿಯಲ್ಲಿ ಮೊದಲಿನಿಂದಲೂ ದೊಡ್ಡಿ ಗೊಬ್ಬರದ ದರ ಹೆಚ್ಚೇ ಇತ್ತು. ಈಗಲೂ ಉಡುಪಿಯಲ್ಲಿ ಪ್ರತಿ ಟನ್‌ಗೆ 6ರಿಂದ 8 ಸಾವಿರ ರೂ. ಇದೆ ಎಂದು ಉಡುಪಿ ಜಿಲ್ಲಾಕೃಷಿ ಡಿಡಿ ಕೆಂಪೇಗೌಡ ಅವರು ಹೇಳುತ್ತಾರೆ. ಆದರೆ ಮಧ್ಯಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ನಾಲ್ಕು ವರ್ಷದ ಹಿಂದೆ 2 ಸಾವಿರ ರೂ.ಗೆ ಒಂದು ಟನ್‌ ದೊಡ್ಡಿ ಗೊಬ್ಬರ ಸಿಗುತ್ತಿತ್ತು.
ಆದರೆ, ಈ ವರ್ಷ 6 ಸಾವಿರ ರೂ. ಕೊಡಬೇಕಾಗಿದೆ. ಆದರೂ ಸಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲಎಂದು ರೈತರು ಹೇಳುತ್ತಾರೆ. ಬದಲಾಗುತ್ತಿರುವ ಸಗಣಿ ಗೊಬ್ಬರದ ದರವು ಗ್ರಾಮಾಂತರ ಜನ ಜೀವನದ ಸ್ಥಿತ್ಯಂತರವೂ ಆಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಉಳುಮೆಗೆ ಟ್ರ್ಯಾಕ್ಟರ್‌ ಯಂತ್ರ, ಗೊಬ್ಬರಕ್ಕೆ ಯೂರಿಯಾ ಎಂಬ ಹೈಟೆಕ್‌ ರೈತರ ನಂಬುಗೆ ಕಾರಣ ಪಶು ಸಂಗೋಪನೆ ಕಡಿಮೆಯಾಗಿದೆ ಎಂದು ಶ್ರೀನಿವಾಸ್‌ ಚಿಂತಾಲ್‌ ಹೇಳಿದರು.ಮಧ್ಯ ಕರ್ನಾಟಕದ ಈ ಎಲ್ಲಜಿಲ್ಲೆಗಳಲ್ಲಿಬೆಲೆ ಹಾಗೂ ಮಳೆಯ ಏರಿಳಿತದಿಂದ ನಷ್ಟ ಅನುಭವಿಸುತ್ತಿರುವ ಈರುಳ್ಳಿ, ಶೇಂಗಾ, ಭತ್ತ ಬೆಳೆಗಾರರು ತೋಟಗಾರಿಕೆ ಬೆಳೆಗೆ ಬದಲಾಗುತ್ತಿದ್ದಾರೆ. ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿಅಡಕೆ ಬೆಳೆಯನ್ನು ತುಂಬುತ್ತಿದ್ದು, 5-10 ಎಕರೆ ತೋಟವನ್ನು ಕೃಷಿ ಉದ್ಯಮದ ರೀತಿಯಲ್ಲಿಬೆಳೆಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 2016ರಲ್ಲಿ 45 ಸಾವಿರ ಹೆಕ್ಟೇರ್‌ ಅಡಕೆ ಕೃಷಿ ಇದ್ದರೆ, 2021ರಲ್ಲಿ75 ಸಾವಿರ ಹೆಕ್ಟೇರ್‌ ಪ್ರದೇಶ ಅಡಕೆ ಬೆಳೆ ತುಂಬಿದೆ. ಸಾವಯವ ಕೃಷಿ ಜಾಗೃತಿಯು ಕೂಡ ಸಗಣಿ ಗೊಬ್ಬರದ ಬಗ್ಗೆ ಒಲವು ಹೆಚ್ಚಲು ಇನ್ನೊಂದು ಕಾರಣವಾಗಿದ್ದು, ಅಡಕೆ ಕೃಷಿಗೆ ಹೆಚ್ಚಾಗಿ ಸಗಣಿ ಗೊಬ್ಬರವೇ ಒಳ್ಳೆಯದಾಗುತ್ತದೆ ಎನ್ನುತ್ತಾರೆ ರೈತರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು