News Karnataka Kannada
Monday, May 13 2024
ಬೆಂಗಳೂರು

ಬೆಂಗಳೂರು: ಭಾರತ್ ಜೋಡೋ ಯಾತ್ರೆ, ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ

Shivakumar: I took Bommai's advice on development issues
Photo Credit : Facebook

ಬೆಂಗಳೂರು:  ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತೆ ಕುರಿತ ಸಮಾಲೋಚನೆ ಸಭೆ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.

ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೇವಾಲ ಅವರು ಆಗಮಿಸಿ ಭಾರತ ಐಕ್ಯತಾ ಯಾತ್ರೆಯ ಸಿದ್ಧತೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ಈ ಯಾತ್ರೆ ಪ್ರಮುಖ ಐದು ವಿಚಾರಗಳನ್ನು ಹೊಂದಿದೆ. ಈ ಯಾತ್ರೆಯಲ್ಲಿ ಎಲ್ಲಾ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಈ ಯಾತ್ರೆ ಸೆ. 30 ರಂದು ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯಿಂದ ಆರಂಭವಾಗಲಿದೆ. ಅ. 2 ರಂದು ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಸರಾ ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಯಾತ್ರೆಗೆ ಬಿಡುವು ನೀಡಲಾಗುವುದು. ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದರು.

ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು, ರೈತರು, ನಾಗರೀಕ ಸಮುದಾಯಗಳು, ವಿದ್ಯಾರ್ಥಿಗಳು, ಬುಡಕಟ್ಟು ಜನರ ಜೊತೆ ಒಂದೊಂದು ದಿನ ಮಾತುಕತೆ ನಡೆಸಲಿದ್ದಾರೆ.

ಪ್ರತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಘಟಕಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಕರೆ ತಂದ ದಿನ ರಾಹುಲ ಗಾಂಧಿ ಅವರ ಜತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುವುದು.

ನಾಗರೀಕ ಸಮಾಜದ ಗಣ್ಯರು, ಕಲಾವಿದರೂ, ಕೈಗಾರಿಕೋದ್ಯಮಿಗಳು, ಚಿಂತಕರು ಸೇರಿದಂತೆ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗುವುದು.

ಈ ಯಾತ್ರೆ ಮಾರ್ಗದಲ್ಲಿ ಬರುವ ಅತಿ ದೊಡ್ಡ ನಗರ ಮೈಸೂರು ಆಗಿದ್ದು, ಮೈಸೂರು ಜನರು ಬೆಳಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಜತೆಗೆ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ ರಾಹುಲ್ ಗಾಂಧಿಯವರು ಮುಂದಾಳತ್ವ ವಹಿಸಬೇಕು ಎಂದು ನಮ್ಮ ರಾಜ್ಯದ ಎಲ್ಲಾ ನಾಯಕರ ಒತ್ತಾಸೆ. ಆದರೆ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು ‘ ಎಂದು ತಿಳಿಸಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಕೆ ಸಿ ವೇಣುಗೋಪಾಲ್ ಮಾತನಾಡಿ ಇಂದು ಭಾರತ ಐಕ್ಯತಾ ಯಾತ್ರೆಯ ಸಿದ್ಧತಾ ಪರಿಶೀಲನಾ ಸಭೆ ಮಾಡಿದ್ದೇವೆ. ಪ್ರದೇಶ ಕಾಂಗ್ರೆಸ್ ಹಾಗೂ ರಾಜ್ಯ ನಾಯಕರು ಮಾಡಿರುವ ಎಲ್ಲಾ ಸಿದ್ಧತೆಗಳು ಎಐಸಿಸಿಗೆ ತೃಪ್ತಿ ತಂದಿದೆ.

ನಮ್ಮ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸೂರ್ಜೇವಾಲ ಅವರು ನಿತ್ಯ ತಯಾರಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ರಾಜ್ಯದಲ್ಲಿನ ಯಾತ್ರೆ ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇದೆ.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಆರಂಭವಾಗಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಎಲ್ಲಾ ವರ್ಗದಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ.

ನಮ್ಮ ನಿರೀಕ್ಷೆ ಮೀರಿ ಲಕ್ಷಾಂತರ ಜನ ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಚ್ಚರಿಯ ವಿಷಯ ಎಂದರೆ, ನಮ್ಮ ನಾಯಕರು ಹೆಜ್ಜೆ ಹಾಕುವಾಗ ನಮ್ಮ ಕಾರ್ಯಕರ್ತರ ಜತೆ ಜನ ಸಾಮಾನ್ಯರೂ ಕುಟುಂಬ ಸಮೇತವಾಗಿ ಮಕ್ಕಳಿಂದ ವೃದ್ಧರವರೆಗೂ ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ. ಇದು ಯಾತ್ರೆಯನ್ನು ಜನ ಒಪ್ಪಿರುವುದಕ್ಕೆ ಸಾಕ್ಷಿ.

ಪಾದಯಾತ್ರೆಯಲ್ಲಿ ಭಾಗವಹಿಸದವರು ಕೂಡ ಶುಭ ಕೋರಿ ಬೆಂಬಲಿಸುತ್ತಿದ್ದಾರೆ. ಇಲ್ಲಿಯವರೆಗೂ ಈ ಯಾತ್ರೆ ಯಶಸ್ವಿಯಾಗಿದ್ದು, ರಾಜ್ಯದಲ್ಲೂ ಯಶಸ್ಸು ಸಾಧಿಸಲು ಎಲ್ಲಾ ತಯಾರಿ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ಬಿಜೆಪಿ ಹಾಗೂ ಸಂಘ ಪರಿವಾರ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಘನತೆ ಹಾಳು ಮಾಡಲು ಪ್ರಯತ್ನಿಸುತ್ತಿದೆ. ಈಗ ಜನರಿಗೆ ರಾಹುಲ್ ಗಾಂಧಿ ಅವರು ಯಾರು ಎಂದು ಅರ್ಥವಾಗುತ್ತಿದೆ.

ಬಿಜೆಪಿಯವರು ಈ ಯಾತ್ರೆ ಬಗ್ಗೆ ಚಿಂತಿತರಾಗಿದ್ದು, ಟೀಕಿಸುತ್ತಿದೆ. ಕಾರಣ ಈ ಯಾತ್ರೆಯಿಂದ ಬಿಜೆಪಿ ಸುಳ್ಳಿನ ಕಾರ್ಖಾನೆ ಛಿಧ್ರವಾಗಲಿದೆ ಎಂದು ಅರಿವಾಗಿದೆ. ರಾಹುಲ್ ಗಾಂಧಿ ಅವರು ಜನಸಾಮಾನ್ಯರು ಹಾಗೂ ಅವರ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಸಾಮಾಜಿಕ ಸಾಮರಸ್ಯದ ಬಗ್ಗೆ ಧ್ವನಿಯಾಗಿದ್ದಾರೆ. ಆರ್ಥಿಕ, ಸಾಮಾಜಿಕ ಅಸಮಾನತೆ, ರಾಜಕೀಯ ದ್ವೇಷದ ವಿಚಾರವಾಗಿ ಈ ಯಾತ್ರೆ ಮಾಡಲಾಗುತ್ತಿದೆ.

ದೇಶದ ರಾಜಕೀಯ ಇತಿಹಾಸದಲ್ಲಿ ಈ ಯಾತ್ರೆ ಒಂದು ತಿರುವು ನೀಡಲಿದೆ

ಯಾತ್ರೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ ಇದೇ ಈ ಯಾತ್ರೆಯ ಯಶಸ್ಸಿಗೆ ಸಾಕ್ಷಿ. ಅವರು ಕ್ಷುಲ್ಲಕ ಕಾರಣಕ್ಕೆ ಟೀಕೆ ಮಾಡುತ್ತಿರುವುದು ಅವರ ಆತಂಕಕ್ಕೆ ಸಾಕ್ಷಿ. ರಾಹುಲ್ ಅವರು ಯಾವ ಟಿ ಶರ್ಟ್, ಚಡ್ಡಿ ಹಾಕಿದರೆ ಬಿಜೆಪಿ ಅವರಿಗೆ ಸಮಸ್ಯೆ ಏನು? ಅವರು ಈ ಯಾತ್ರೆಗೆ ಅಡ್ಡಿ ಪಡಿಸಲು ಪ್ರಯತ್ನಿಸುತ್ತಿದ್ದು, ಈ ಯಾತ್ರೆ ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಮುಟ್ಟಿದೆ. ದಿನೇ ದಿನೆ ಯಾತ್ರೆಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ‘ ಎಂದರು.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಕೇಳಿದಾಗ, ‘ ಅಧ್ಯಕ್ಷ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. 30ರ ವರೆಗೂ ನಾಮಪತ್ರ ಸಲ್ಲಿಕೆ ಮಾಡಬಹುದು. ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಧ್ಯಕ್ಷರನ್ನು ಪ್ರಜಾಪ್ರಭುತ್ವ ಆಧಾರದ ಮೇಲೆ ಆರಿಸಲಿದೆ. ಎಲ್ಲಾ ಮಾಧ್ಯಮಗಳು ಈ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿವೆ. ಮಾಧ್ಯಮಗಳು ಬೇರೆ ಪಕ್ಷಗಳ ಚುನಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಮಗೆ ಹೆಮ್ಮೆ ಇದೆ. ಅ. 19ರಂದು ನೂತನ ಅಧ್ಯಕ್ಷ ಆಯ್ಕೆ ಆಗಲಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ನೂತನ ಅಧ್ಯಕ್ಷರ ನಾಯಕತ್ವದಲ್ಲಿ ಸಾಗಲಿದ್ದಾರೆ ‘ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗ ಬೇಕು ಎಂದು ಕಾಂಗ್ರೆಸಿಗರು ಬಯಸುತ್ತಿದ್ದಾರೆ ಎಂದು ಕೇಳಿದಾಗ, ‘ ರಾಹುಲ್ ಗಾಂಧಿ ಅವರು ಮುಂದಾಳತ್ವ ವಹಿಸಿ ನಿತ್ಯ 25 ಕಿ.ಮೀ ಸರಾಸರಿಯಲ್ಲಿ 150 ದಿನ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವ ನಾಯಕ ಇಂತಹ ಪಾದಯಾತ್ರೆ ಮಾಡಲು ಸಾಧ್ಯ?’ ಎಂದರು.

ಪೇ ಸಿಎಂ ಅಭಿಯಾನ ಕುರಿತು ಕೇಳಿದಾಗ, ‘ ಈ ಅಭಿಯಾನ ಆರಂಭಿಸಿರುವುದು ಕಾಂಗ್ರೆಸ್ ಪಕ್ಷ ಅಲ್ಲ. ಇದು ಜನರ ಸಮಸ್ಯೆಗೆ ಧ್ವನಿಯಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈ ಸರ್ಕಾರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜನ ಹೇಳುತ್ತಿದ್ದಾರೆ. ಇದು ಬಿಜೆಪಿ ಚಿಂತೆಗೀಡು ಮಾಡಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಹಲವರನ್ನು ದೇಶಾದ್ಯಂತ ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು