ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಣ ಕ್ಷೇತ್ರದ ನೈತಿಕತೆಯನ್ನೇ ಪ್ರಶ್ನಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಕೇವಲ ಎರಡು ನಿಮಿಷ ತಡವಾಗಿ ಬಂದ ಕಾರಣಕ್ಕೆ, ಮೊದಲ ತರಗತಿಯ ಪುಟ್ಟ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲೆ ಅಮಾನವೀಯ ಶಿಕ್ಷೆ ನೀಡಿದೆ.
ಮೊದಲ ತರಗತಿಯ ಮಗು ದೈಹಿಕವಾಗಿ ಇಷ್ಟು ಸುದೀರ್ಘ ಅವಧಿಯ ಶಿಕ್ಷೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಶಾಲಾ ಆಡಳಿತ ಮಂಡಳಿ ವರ್ತಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಘಟನೆಯನ್ನು ತಿಳಿದ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲು ಹೋದಾಗ, ಶಾಲೆಯ ಸಿಬ್ಬಂದಿ ಮತ್ತು ಮ್ಯಾನೇಜ್ಮೆಂಟ್ ಕ್ಷಮೆಯಾಚಿಸುವ ಬದಲು ಅತ್ಯಂತ ಅಹಂಕಾರದಿಂದ ವರ್ತಿಸಿದ್ದಾರೆ. ಮಗುವಿನ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕಾಳಜಿ ವಹಿಸಬೇಕಾದ ಶಿಕ್ಷಕರು, ಪೋಷಕರ ಜೊತೆ ಉದ್ಧಟತನದಿಂದ ಮಾತನಾಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ತಡವಾಗಿ ಬಂದದ್ದಕ್ಕೆ ಶಿಸ್ತು ಕ್ರಮದ ಹೆಸರಿನಲ್ಲಿ ಮಗುವಿನ ಹಕ್ಕುಗಳನ್ನು ಉಲ್ಲಂಘಿಸಿರುವುದು ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಬೆಂಗಳೂರಿನ ಸುಡುವ ಬಿಸಿಲಿನಲ್ಲಿ ಮಗುವನ್ನು ನಿಲ್ಲಿಸಿದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಕಠಿಣ ನಿಯಮಗಳಿದ್ದರೂ, ಶಾಲೆಯ ಈ ದರ್ಪದ ವರ್ತನೆ ಪೋಷಕರಲ್ಲಿ ಭೀತಿ ಮೂಡಿಸಿದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಮಗುವಿನ ಮೇಲೆ ಕ್ರೌರ್ಯ ಎಸಗಿದ ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

