ಬೆಂಗಳೂರು: ಅಕ್ರಮ ಬಾಂಗ್ಲಾವಲಸಿಗರು ಹಾಗೂ ವೀಸಾ ಅವಧಿ ಮುಕ್ತಾಯಗೊಂಡವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಗರ ಪೊಲೀಸರು, ಮಾ.6ರಂದು 124 ಮಂದಿ ಅಕ್ರಮ ಬಾಂಗ್ಲಾವಲಸಿಗರನ್ನು ಬಂಧಿಸಿದ್ದಾರೆ.

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ನಾಲ್ಕು ತಂಡ ಶುಕ್ರವಾರ ಮುಂಜಾನೆ ಕಾಡೊಗೋಡಿ, ವರ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಶೆಡ್‌ಗಳನ್ನು ನಿರ್ಮಿಸಿಕೊಂಡು ಅಕ್ರಮವಾಗಿ ಭಾರತದ ಒಳಗೆ ನುಸುಳಿ ನೆಲೆಸಿದ್ದ 48 ಪುರುಷರು, 42 ಮಹಿಳೆಯರು ಮತ್ತು 34 ಮಕ್ಕಳು ಸೇರಿ 124 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆ ವೇಳೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅಕ್ರಮದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಸಿಸಿಬಿ ಪೊಲೀಸರು ಎಫ್‌ಆರ್‌ ಆರ್‌ಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಾಂಗ್ಲಾ ನಿವಾಸಿಗಳ ವಿರುದ್ಧ ಕಾರ್ಯಾಚರಣೆ ಯಲ್ಲಿ ಸಿಸಿಬಿ ಪೊಲೀಸರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಬಿಎ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

200 ವಿದೇಶಿಗರು ಪತ್ತೆ: ಸ್ಟುಡೆಂಟ್‌, ಬ್ಯೂಸಿನೆಸ್‌, ಪ್ರವಾಸದ ವೀಸಾದೊಂದಿಗೆ ಬೆಂಗಳೂರಿಗೆ ಆಗಮಿಸಿರುವ ವಿದೇಶಗರು ವೀಸಾ ಅವಧಿ ಮುಕ್ತಾಯಗೊಂಡಿದ್ದರು ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿಂದಿನ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶಿಗರ ಜತೆ ನೈಜೀರಿಯಾ, ಥಾಯ್ಲೆಂಡ್‌, ಆಫ್ರಿಕಾ, ಸುಡಾನ್‌ ಸೇರಿ ವಿವಿಧ ದೇಶಗಳ 200 ಜನರು ಅಕ್ರಮ ನಿವಾಸಿಗಳು ಪತ್ತೆಯಾಗಿದ್ದಾರೆ.