ಬೆಂಗಳೂರು: ಬಿಎಂಟಿಸಿ ಸಾಲದ ಸುಳಿಯಲ್ಲಿ ಮುಳುಗಿದೆ ಎನ್ನುವುದಕ್ಕೆ ಸಾಕ್ಷಿಯ ಮಾಹಿತಿಯ ದಾಖಲೆಯೊಂದು ಹೊರ ಬಿದ್ದಿದೆ. ಇದೀಗ ತಾನಿರುವಂತ ಬಿಎಂಟಿಸಿ ಟಿಟಿಎಂಸಿ ಕಟ್ಟಡವನ್ನ ಸಾಲಕ್ಕಾಗಿ ಅಡಮಾನ ಇಟ್ಟಿರೋದು ಬಹಿರಂಗವಾಗಿದೆ.
ಈ ಕುರಿತಂತೆ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ದಿನಾಂಕ 14-09-2021ರಂದು ಸಲ್ಲಿಸಲಾದಂತ ಅರ್ಜಿಯಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2016ರಿಂದ ದಿನಾಂಕ 01-09-2021ರವರೆಗೆ ಸಾಲ ಮಾಡಿರುವ ಹಣದ ಮೊತ್ತ, ಪ್ರತಿ ವರ್ಷವಾರು ಈ ಹಣಕ್ಕೆ ನೀಡಿರುವ ಬಡ್ಡಿಯ ಹಣದ ಮೊತ್ತ, ಸ್ಥಳೀಯ ಆಸ್ತಿಯನ್ನು ಅಡಮಾನ ಇಟ್ಟಿರುವ ಬಗ್ಗೆ ವಿವರ ನೀಡುವಂತೆ ಕೋರಿದ್ದರು.
ಇದಕ್ಕೆ ಉತ್ತರಿಸಿ, ಮಾಹಿತಿ ನೀಡಿರುವಂತ ಬಿಎಂಟಿಸಿಯು, ನೀವು ಕೇಳಿರುವಂತ ಮಾಹಿತಿಯು www.mybmtc.karnataka.gov.in ಜಾಲತಾಣದಲ್ಲಿ ಲಭ್ಯವಿದೆ. ಬಿಎಂಟಿಸಿ ಬಗ್ಗೆ ಇನ್ನಷ್ಟು ಮಾಹಿತಿ ಭಾಗದಲ್ಲಿ 2016-17 ರಿಂದ 2019-20ರವರೆಗೆ ಲಭ್ಯವಿರುತ್ತದೆ. 2020-21ನೇ ಸಾಲಿನ ಮಾಹಿತಿಗೆ ಸಂಬಂಧಿಸಿದಂತೆ ರೂ.407.05 ಕೋಟಿಗಳ ಸಾಲವನ್ನು ಪಡೆಯಲಾಗಿದೆ.ಒಟ್ಟು 57.57 ಕೋಟಿಗಳ ಬಡ್ಡಿಯನ್ನು ಪಾವತಿಸಲಾಗಿದೆ.
ಮುಂದುವರೆದು 2019-20 ಮತ್ತು 2020-21ನೇ ಸಾಲಿನಲ್ಲಿ ಸಂಸ್ಥೆಯು ಪಡೆದಿರುವ ರೂ.160 ಕೋಟಿ ಮತ್ತು ರೂ.230 ಕೋಟಿ ಸಾಲಕ್ಕೆ ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇರಿಸಲಾಗಿದೆ ಎಂಬುದಾಗಿ ತಿಳಿಸಿದೆ. ಈ ಮೂಲಕ ಸಾಲದ ಸುಳಿಯಲ್ಲಿ ಬಿಎಂಟಿಸಿ ಇರೋದು ತಿಳಿದು ಬಂದಿದೆ.
ಈ ಹಿಂದೆ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ್ ಸವದಿ ಆಡಳಿತ ಅವಧಿಯಲ್ಲಿ ಬಿಎಂಟಿಸಿ ಇತಿಹಾಸದಲ್ಲೇ ಅತ್ಯಧಿಕ ಸಾಲ ಪಡೆದಿದೆ. ಇದರಿಂದಾಗಿ ಪ್ರಸ್ತುತ 400 ಕೋಟಿಗೂ ಅಧಿಕ ಸಾಲವನ್ನು ತನ್ನ ಮೇಲೆ ಹೊತ್ತುಕೊಂಡಿ ಎಂಬುದಾಗಿ ಹೇಳಲಾಗುತ್ತಿದೆ.
ಒಟ್ಟಾರೆ ದೇಶದ ನಂ.1 ಸಾರಿಗೆ ಸಂಸ್ಥೆಯಾದಂತ ಬಿಎಂಟಿಸಿ 407 ಕೋಟಿ ಸಾಲಕ್ಕೆ ಬರೋಬ್ಬರಿ 57 ಕೋಟಿ ಬಡ್ಡಿ ಕಟ್ಟುವ ಸ್ಥಿತಿಯಲ್ಲಿದೆ. ಇದಕ್ಕಾಗಿ ಬಿಎಂಟಿಸಿ ಕೇಂದ್ರ ಕಚೇರಿಯ ಶಾಂತಿನಗರದ ಟಿಟಿಎಂಸಿಯನ್ನೇ ಅಡಮಾನವಾಗಿ ಇಟ್ಟಿರೋದು ಬಹಿರಂಗಗೊಂಡಿದೆ.