ಬೆಂಗಳೂರು: ಮಾಲ್ಡಿವ್ಸ್ ನ ವಿಮಾನಯಾನ ಸಂಸ್ಥೆ ಮಾಂಟಾ ಏರ್ ಲೈನ್ಸ್ ಹೊಸ ವರ್ಷದಿಂದ ಬೆಂಗಳೂರಿನಿಂದ ಮಾಲ್ಡಿವ್ಸ್ ಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣದಂತಹ ಸ್ಥಳಗಳಿಗೆ ವಿಸ್ತರಿಸಲು ಮಾಂಟಾ ಏರ್ ಯೋಜಿಸುತ್ತಿದೆ.
2024ರ ಜನವರಿಯಿಂದ ಬೆಂಗಳೂರು ಹಾಗೂ ಮಾಲ್ಡಿವ್ಸ್ ನಡುವೆ ಹೊಸ ನೇರ ವಿಮಾನ ಮಾರ್ಗ ಪ್ರಾರಂಭವಾಗಲಿದೆ. ವಿಮಾನಯಾನ ಸಂಸ್ಥೆಯು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ನ ಧಾಲು ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳನ್ನು ನಿರ್ವಹಿಸುತ್ತದೆ.
ಈ ವಿಮಾನಗಳು ವಾರದಲ್ಲಿ ಮೂರು ದಿನಗಳು ಕಾರ್ಯನಿರ್ವಹಿಸಲಿದ್ದು, ಎಲ್ಲಾ ವಿಮಾನಗಳು ಬೆಳಿಗ್ಗೆ ಮಾಲ್ಡೀವ್ಸ್ಗೆ ಆಗಮಿಸುತ್ತವೆ ಮತ್ತು ಸಂಜೆ ತಡವಾಗಿ ಭಾರತಕ್ಕೆ ಹೊರಡುತ್ತವೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರು ಮಾಲೆಯಲ್ಲಿರುವ ಮುಖ್ಯ ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗುವ ತೊಂದರೆಗಳು ತಪ್ಪುತ್ತವೆ. ಜೊತೆಗೆ ಹೆಚ್ಚುವರಿ ವೆಚ್ಚವನ್ನು ತಪ್ಪಿಸಲು ಮತ್ತು ಅನೇಕ ಐಷಾರಾಮಿ ರೆಸಾರ್ಟ್ಗಳಿಗೆ ನೇರ ಪ್ರವೇಶವನ್ನು ಪಡೆಯಲು ನೇರ ವಿಮಾನಯಾನ ಅನುವು ಮಾಡಿಕೊಡುತ್ತದೆ ಎಂದು ಮಾಂಟಾ ಡೆಪ್ಯೂಟಿ ಸಿಇಒ ಅಹ್ಮದ್ ಮೌಮೂನ್ ಹೇಳಿದ್ದಾರೆ.