ಬೆಂಗಳೂರು : ನಟ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಇಡೀ ದಕ್ಷಿಣ ಭಾರತ ಚಿತ್ರರಂಗ ಒಂದೆಡೆ ಸೇರಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮಕ್ಕೆ ಕಾಲಿವುಡ್ ನಟ ವಿಶಾಲ್ ಅವರು ಆಗಮಿಸಿದ್ದಾರೆ.
ಈ ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ವಿಶಾಲ್, ‘ನನ್ನ ಸ್ನೇಹಿತ ಪುನೀತ್ ಒಳ್ಳೆಯ ನಟ, ವ್ಯಕ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್ಗೆ ಪ್ರಾಮಿಸ್ ಮಾಡುತ್ತಿದ್ದೇನೆ. ನಾನು ಹೇಳಿದ ಮಾತನ್ನು ನಡೆಸಿಕೊಡುತ್ತೇನೆ.
ಅವರು ಬದುಕಿದ್ದಾಗ ತಾವು ಮಾಡಿದ ಸಮಾಜಸೇವೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ನೀವು ಮೃತಪಟ್ಟ ನಂತರ ನಿಮ್ಮ ಕಾರ್ಯಗಳ ಬಗ್ಗೆ ಇಡೀ ದೇಶಕ್ಕೆ ತಿಳಿಯಿತು. ನೀವು ಮಾಡುತ್ತಿದ್ದ ಕಾರ್ಯವನ್ನು ನಾನು ಮುಂದುವರಿಸುತ್ತೇನೆ’ ಎಂದು ವಿಶಾಲ್ ಹೇಳಿದರು.
‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗಿ ಆಗಿದ್ದಾರೆ.