ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರನ ಹಮ್ಮಿಕೊಂಡಿತ್ತು. ಪುನೀತ್ ರಾಜ್ಕುಮಾರ್ ಹೆಸರಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಇಂದು ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿತ್ತು. ವೆಜ್ ಮತ್ತು ನಾನ್ವೆಜ್ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. 25 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. 5 ಸಾವಿರ ಜನರಿಗೆ ಸಸ್ಯಾಹಾರಿ ಊಟಕ್ಕೆ ವ್ಯವಸ್ಥೆ ಇಡಲಾಗಿತ್ತು.
ಒಟ್ಟು 28-30 ಸಾವಿರ ಜನರು ಊಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ರೆಡಿ ಮಾಡಲಾಗಿತ್ತು. 25 ಸಾವಿರ ಕೆ.ಜಿ. ಸೋನಾ ಮಸೂರಿ ಅಕ್ಕಿ, 750 ಲೀ. ಅಡುಗೆ ಎಣ್ಣೆ, 100 ಕಟ್ಟು ಪುದೀನ ಸೊಪ್ಪು, 100 ಕೆ.ಜಿ ಟೊಮ್ಯಾಟೋ, ತಲಾ 50 ಕೆ.ಜಿ ಈರುಳ್ಳಿ, ಬೆಳ್ಳುಳ್ಳಿ, 3 ಸಾವಿರ ಕೆ.ಜಿ. ಚಿಕನ್, 8500 ಕೋಳಿ ಮೊಟ್ಟೆ, 50, 60,70 & 80 ಕೆ.ಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ತಯಾರಿ ಮಾಡಲಾಗಿತ್ತು.