News Karnataka Kannada
Monday, April 29 2024
ಬೆಂಗಳೂರು

ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ: ಸಿಎಂ, ಡಿಕೆಶಿ, ಸಿದ್ದರಾಮಯ್ಯ, ದೇವೇಗೌಡ, ಹೆಚ್​​ಡಿಕೆ ಸೇರಿದಂತೆ ಗಣ್ಯರ ಸಂತಾಪ

Fernandes Oscar 13092021
Photo Credit :

ಬೆಂಗಳೂರು :  ಕೇಂದ್ರದ ಮಾಜಿ ಸಚಿವರು, ಕಾಂಗ್ರೆಸ್ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ಸಿದ್ದರಾಮಯ್ಯ, ಮಾಜಿ ಪಿಎಂ ದೇವೇಗೌಡ ಹಾಗೂ ಹೆಚ್​​ಡಿಕೆ, ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ಸಿಎಂ ಬೊಮ್ಮಾಯಿ, ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಆಸ್ಕರ್ ಫರ್ನಾಂಡಿಸ್ ಅವರು ಇಂದು ನಮ್ಮನ್ನೆಲ್ಲ ಅಗಲಿರುವುದು ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಕೋರುತ್ತೇನೆ. ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಡಿಕೆಶಿ ಟ್ವೀಟ್​ ಮಾಡಿ, ಆಸ್ಕರ್ ಅವರು ಗಾಂಧಿ ತತ್ವ ಹಾಗೂ ಸರಳತೆಗೆ ಮತ್ತೊಂದು ಹೆಸರಾಗಿದ್ದವರು. ಸಾಮಾನ್ಯ ಕುಟುಂಬದಿಂದ ಬಂದ ಅವರು, ಕೇಂದ್ರ ಸಚಿವರಾಗಿ ನಮಗೆ ಉತ್ತಮ ಮಾರ್ಗದರ್ಶನ ನೀಡಿ, ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದ ಧೀಮಂತ ನಾಯಕ. ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ, ಪಕ್ಷವನ್ನು ಮುನ್ನಡೆಸಿದ್ದಾರೆ.
ಆಸ್ಕರ್ ಫರ್ನಾಂಡಿಸ್ ಅವರ ಅಗಲಿಕೆ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ. ನಾನು ಯುವ ನಾಯಕನಾಗಿದ್ದಾಗಿನಿಂದ ಅವರ ಮಾರ್ಗದರ್ಶನ ಪಡೆದಿದ್ದೆ. ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತಾಗ ಅವರು ನನಗೆ ಕೊಟ್ಟ ಕೆಲವು ಸಲಹೆ ಹಾಗೂ ಸೂಚನೆಗಳು ಅಮೂಲ್ಯವಾದವು. ಪಕ್ಷದಲ್ಲಿ ನೂತನವಾಗಿ ಚಾಲಕರ ಘಟಕ ಸ್ಥಾಪಿಸಿ ಎಂದು ನನಗೆ ಸಲಹೆ ನೀಡಿದ್ದೇ ಆಸ್ಕರ್ ಫರ್ನಾಂಡಿಸ್ ಅವರು. ಹೀಗಾಗಿ, ನಾನಿಂದು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ. ಮಂಗಳೂರು ಪ್ರವಾಸ ಮಾಡಿದಾಗೆಲ್ಲ ನಾನು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದೆ. ಇತ್ತೀಚೆಗೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದಾಗಲೂ ನಾನು ಹೋಗಿ ಅವರ ಆರೋಗ್ಯ ವಿಚಾರಿಸಿದ್ದೆ. ಇಂದು ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ.ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ‌ ಮತ್ತು ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.‌ ಸರಳ,‌ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಕಾರ್ಯಕರ್ತರ ನಾಯಕರಾಗಿದ್ದರು. ಆಸ್ಕರ್ ಕುಟುಂಬದ ದುಃಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ‌ಕೋರುವೆ ಎಂದಿದ್ದಾರೆ.ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಶಾಸಕರು ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಹಲವು ನಾಯಕರು ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ‌ ಹೆಚ್ ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಹೆಚ್‌ಡಿಡಿ, ಸುದ್ದಿ ತಿಳಿದು ತೀವ್ರ ಬೇಸರವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರು ಹಾಗೂ ನಾಡಿನಾದ್ಯಂತ ಇರುವ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದಿದಾರೆ.

ನಮ್ಮ ನಾಡಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ನನ್ನ ಆಪ್ತರೂ ಆಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವ ಹೊತ್ತಿನಲ್ಲಿ ಈ ಆಘಾತದ ಸುದ್ದಿ ಬಂದಿದೆ ಎಂದು ಮಾಜಿ ಸಿಎಂ ಹೆಚ್ ಡಿಕೆ ಕಂಬನಿ ಮಿಡಿದಿದ್ದಾರೆ.
ಐದು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು ಅವರು. ಕೇಂದ್ರ ಸರಕಾರ ಮತ್ತು ರಾಜ್ಯದ ಕೊಂಡಿಯಾಗಿದ್ದರು. ರಾಜ್ಯಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದರಲ್ಲದೆ, ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದರು ಎಂದಿದ್ದಾರೆ.
ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಆಸ್ಕರ್ ಫರ್ನಾಂಡಿಸ್ ಅವರು, ದೇಶದ ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ರಾಜಕೀಯವನ್ನು ಮೀರಿ ಎಲ್ಲರನ್ನೂ ಆದರಿಸುತ್ತಿದ್ದರು. ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ ಅವರದ್ದಾಗಿತ್ತು.ಕಾಂಗ್ರೆಸ್ ಕಟ್ಟಾಳುವಾಗಿದ್ದ ಅವರು ಪಕ್ಷವನ್ನು ಮಾತೃ ಸ್ವರೂಪದಂತೆ ಕಂಡವರು. ನಿಷ್ಠೆ, ನಂಬಿಕೆಯ ಪ್ರತೀಕವಾಗಿದ್ದರು. ಕಾಂಗ್ರೆಸ್ ಸಂಸ್ಕೃತಿಗೆ ಎಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡರು. ಅವರಿಗೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು